

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ನಗರದ ಮುಖ್ಯ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದ್ದು, ವಾಹನ ಸವಾರರಿಗೆ ಪ್ರತಿದಿನ ಕಿರಿಕಿರಿ ತಪ್ಪದಂತಾಗಿದೆ.
ಇಡೀ ರಸ್ತೆಯನ್ನು ಆಕ್ರಮಿಸುವ ಈ ದನಗಳಿಂದ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ. ಇವುಗಳ ಮಾಲೀಕರು ಯಾರು? ಹೀಗೇಕೆ ರಸ್ತೆಗೆ ಬಿಟ್ಟಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲವಾಗಿದೆ. ರಾತ್ರಿಯಾದರೆ ಸಾಕು, ಹಿಂಡು-ಹಿಂಡಾಗಿ ಕಾಣಿಸಿಕೊಳ್ಳುವ ಬಿಡಾಡಿ ದನಗಳು ರಸ್ತೆಗಳನ್ನೇ ತಮ್ಮ ವಾಸ ಸ್ಥಳವನ್ನಾಗಿ ಮಾಡಿಕೊಂಡಿದ್ದರಿಂದ ಜನಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ನಗರಸಭೆ ಅಧಿಕಾರಿಗಳು ಇದಕ್ಕೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಬೇಸರ ತೋಡಿಕೊಳ್ಳುತ್ತಿದ್ದಾರೆ.
ಗಾಂಧಿ ವೃತ್ತ, ಬಸವೇಶ್ವರ ಗಂಜ್, ಶಾಸ್ತ್ರಿ ಸರ್ಕಲ್, ಕನಕ ವೃತ್ತ, ಹತ್ತಿಕುಣಿ ವೃತ್ತ ಹೀಗೆ ಅನೇಕ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿವೆ. ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ದನಗಳು ನೇರವಾಗಿ ತರಕಾರಿ ಬುಟ್ಟಿಗೆ ಬಾಯಿ ಹಾಕುತ್ತಿದ್ದರಿಂದ ವ್ಯಾಪಾರಸ್ಥರು ಥಂಡಾ ಹೊಡೆದಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಂಚಾರ ಪೊಲೀಸರು ಟೈಟ್ ಡ್ಯೂಟಿ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿಯುವ ಜನರನ್ನು ನಿಯಂತ್ರಿಸುವುದರ ಜತೆಗೆ ದನಗಳನ್ನೂ ಹೊಡೆದೋಡಿಸುವ ಹೆಚ್ಚುವರಿ ಕೆಲಸ ಮಾಡುವಂತಾಗಿದೆ.
ರಾತ್ರಿ ವೇಳೆ 40-50 ದನಗಳು ರಸ್ತೆಯಲ್ಲಿ ಕಂಡು ಬರುತ್ತವೆ. ಈ ವೇಳೆ ಲಾರಿ ಸೇರಿ ಗೂಡ್ಸ್ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಕೆಲವೊಮ್ಮೆ ಚಾಲಕರ ನಿಯಂತ್ರಣ ತಪ್ಪಿ ದನಗಳ ಮೇಲೆ ವಾಹನ ಹರಿದು ಅಸುನೀಗಿದ ಘಟನೆಗಳೂ ನಡೆದಿವೆ. ಈ ಹಾವಳಿ ತಪ್ಪಿಸುವಂತೆ ಜನಪರ ಸಂಘ-ಸಂಸ್ಥೆಗಳು ಅನೇಕ ಬಾರಿ ನಗರಸಭೆಗೆ ಮನವಿ ಮಾಡಿವೆ. ಈ ಹಿಂದೆ ನಗರಸಭೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಗಳಲ್ಲಿ ಬಿಡಾಡಿ ದನಗಳು ಸೃಷ್ಟಿಸುವ ಅವಾಂತರದ ಬಗ್ಗೆ ಗಂಭೀರ ಚಚರ್ೆಗಳು ನಡೆದಿವೆ. ಆದರೆ ಪ್ರಯೋಜನ ಮಾತ್ರ ಶೂನ್ಯ.
ದನಗಳನ್ನು ರಸ್ತೆಗೆ ಬಿಡುವ ಮಾಲೀಕರು ಅಪಘಾತಕ್ಕೀಡಾದರೆ ದೊಡ್ಡ ಪ್ರಮಾಣದಲ್ಲಿ ರಂಪಾಟ ಮಾಡಿ ಪರಿಹಾರ ಕೆಳಲು ಮುಂದಾಗುತ್ತಾರೆ. ಮೇಯಿಸಿದ ಬಳಿಕ ಅವುಗಳನ್ನು ಕೊಂಡೊಯ್ದು ರಕ್ಷಣೆ ಮಾಡಬೇಕಿರುವುದು ಮಾಲೀಕರ ಕರ್ತವ್ಯ ಎನ್ನುತ್ತಾರೆ ಅಧಿಕಾರಿಗಳು. ಇನ್ನು ಏಕಾಏಕಿ ಅಡ್ಡಾದಿಡ್ಡಿಯಾಗಿ ನುಗ್ಗುವ ದನಗಳಿಂದ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಇವುಗಳನ್ನು ಹಿಡಿದು ಕೊಂಡವಡಿಗೆ ಬಿಡಲು ಸ್ಥಳೀಯ ಸಂಸ್ಥೆ ಆಡಳಿತ ಮೀನಾಮೇಷ ಮಾಡುತ್ತಿದೆ. ಕೆಲವರು ವಾರಸುದಾರರಿಲ್ಲದ ದನಗಳನ್ನು ನೇರವಾಗಿ ಕಸಾಯಿಖಾನೆಗೆ ಕಳುಹಿಸುತ್ತಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬೀಡಾಡಿ ದನಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗುವ ಜರೂರಿ ಎನಿಸಿದೆ.