

ರೇವಣಸಿದ್ದಪ್ಪ ಪಾಟೀಲ್ ಬೀದರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಗಣಕಯಂತ್ರ ವಿಭಾಗದ ಮುಖ್ಯ ಪೇದೆ ಶಿವಶಂಕರ ಚಿಮಕೋಡೆ 2021ರ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ವಿಧಾನಸೌಧದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಪದಕ ಪ್ರದಾನ ಮಾಡಿ ಗೌರವಿಸಿದರು.
ಗಣಕಯಂತ್ರ ವಿಭಾಗದ ಮಾಹಿತಿ ತಂತ್ರಜ್ಞಾನ (ಐಟಿ)ದಲ್ಲಿ ಸಲ್ಲಿಸಿರುವ ಉತ್ತಮ ಸೇವೆಯಿಂದ ಶಿವಶಂಕರ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಜಿಲ್ಲಾದ್ಯಂತ ಎಲ್ಲ ಠಾಣೆಗಳಲ್ಲಿ ಕಂಪ್ಯೂಟರ್ ಅಳವಡಿಕೆ, ನಿರ್ವಹಣೆ ಮತ್ತು ತರಬೇತಿ ಯಶಸ್ವಿಯಾಗಿ ನೀಡಿದ ಹಿನ್ನೆಲೆಯಲ್ಲಿ ಸಿಎಂ ಮೆಡಲ್ ಸಂದಿದೆ. ಇವರ ತಂದೆ ಅಮೃತ ಚಿಮಕೋಡೆ ಅವರು ಅಗ್ನಿಶಾಮಕದಲ್ಲಿ ಮಾಡಿದ ಸೇವೆ ಪರಿಗಣಿಸಿ ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಪದಕ ಪಡೆದಿದ್ದು, ಇದೀಗ ನಿವೃತ್ತಿ ಹೊಂದಿದ್ದಾರೆ.
ಹಾರೂರಗೇರಿ ನಿವಾಸಿಯಾದ ಶಿವಶಂಕರ ಚಿಮಕೋಡೆ 2002ರಲ್ಲಿ ಡಿಎಆರ್ನಲ್ಲಿ ಪೇದೆಯಾಗಿ ಸೇವೆಗೆ ಸೇರಿದರು. ಹತ್ತು ವರ್ಷಗಳಿಂದ ಎಸ್ಪಿ ಕಚೇರಿ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಐಟಿ ತಂತ್ರಾಂಶದಲ್ಲಿ ಡಾಟಾ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬರುತ್ತಿದ್ದು ಹಾಗೂ ಅದರಲ್ಲಾಗುವ ಬದಲಾವಣೆಗಳನ್ನು ಕಾಲಕಾಲಕ್ಕೆ ಅಧಿಕಾರಿ ಮತ್ತು ಸಿಬ್ಬಂದಿ ಗಮನಕ್ಕೆ ತಂದು ತರಬೇತಿ ನೀಡಿ ಅನುಷ್ಠಾನಗೊಳಿಸುವಲ್ಲಿ ಶಿವಶಂಕರ ಪಾತ್ರ ಪ್ರಮುಖ. ಸಿಸ್ಟಮ್ ಅಡ್ಮಿನ್ಗೆ ಸಂಬಂಧಿಸಿದ ಎಲ್ಲ ಕೆಲಸ-ಕಾರ್ಯ ಉತ್ತಮ ರೀತಿಯಲ್ಲಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಎಲ್ಲ ಠಾಣೆ ಮತ್ತು ಹಿರಿಯ ಅಧಿಕಾರಿಗಳ ಕಚೇರಿಗಳಲ್ಲಿನ ಸಿಬ್ಬಂದಿಗೆ ಗಣಕಯಂತ್ರ ಜ್ಞಾನದ ಬಗ್ಗೆ ಹಂತಹಂತವಾಗಿ ತರಬೇತಿ ನೀಡಿ ಪರಿಣತರನ್ನಾಗಿ ಮಾಡಿದ್ದಾರೆ. ಇದರಿಂದ ಠಾಣೆ ಹಾಗೂ ಸಿಪಿಐ, ಡಿವೈಎಸ್ಪಿ ಕಚೇರಿಗಳಲ್ಲಿ ಗಣಕೀಕರಣ ಕಾರ್ಯ ಸುರಳಿತವಾಗಿ ನಡೆದಿದೆ. ಅಧಿಕಾರಿ ಮತ್ತು ಸಿಬ್ಬಂದಿ ಜತೆ ಸತತ ಸಂಪರ್ಕದಲ್ಲಿ ಇದ್ದುಕೊಂಡು ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಶಿವಶಂಕರ ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಜ್ಯ ಪೊಲೀಸ್ ಆಧುನೀಕರಣಕ್ಕಾಗಿ ಹಲವಾರು ಕಾರ್ಯಗಳನ್ನು ಕೈಗೊಂಡಿದೆ. ಇದರ ಅಂಗವಾಗಿ ಠಾಣೆ, ಕಚೇರಿಗಳಲ್ಲಿ ನಿರ್ವಹಿಸುವ ದಾಖಲೆಗಳ ಗಣಕೀಕರಣವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಗಣಕಯಂತ್ರದ ಬುನಾದಿ ತರಬೇತಿ ಹಾಗೂ ಪೊಲೀಸ್ ಐಟಿ ತರಬೇತಿ ನೀಡಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಚಿಮಕೋಡೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ಸಿಸಿಟಿಎನ್ಎಸ್ ಯೋಜನೆಯಡಿ ಸೃಜನೆಗೊಂಡ ಸಿಟಿಜನ್ ಸೆಂಟ್ರಿಕ್ ಪೋರ್ಟಲ್ ತಂತ್ರಾಂಶ, ಡಿಜಿಟಲ್ ಇಂಡಿಯಾ ಯೋಜನೆಯ ಇಂಟರ್ ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟ್ಂ (ಐಸಿಜೆಎಸ್) ತಂತ್ರಾಂಶ, ಸ್ಮಾಟರ್್ ಈ-ಬೀಟ್ ತಂತ್ರಾಂಶ, ವಾಹನ ಸಮನ್ವಯ, ಐಆರ್ಎಡಿ (ಇಂಟಿಗ್ರೇಟೆಡ್ ರೋಡ್ ಆಕ್ಷಿಡೆಂಟ್ ಡಾಟಾಬೇಸ್) ತಂತ್ರಾಂಶಗಳನ್ನು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಅಳವಡಿಸಿದ್ದಲ್ಲದೆ, ಈ ತಂತ್ರಾಂಶಗಳ ಬಗ್ಗೆ ಅಧಿಕಾರಿ ಮತ್ತು ಗಣಕಯಂತ್ರ ಸಿಬ್ಬಂದಿಗೆ ತರಬೇತಿ ನೀಡಿ ಸರಿಯಾಗಿ ನಿರ್ವಹಣೆ ಆಗುವಲ್ಲಿ ಚಿಮಕೋಡೆ ಕಾರ್ಯವನ್ನು ಶ್ಲಾಘಿಸುತ್ತಾರೆ ಮೇಲಧಿಕಾರಿಗಳು.
ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಗಣಕಯಂತ್ರ ಮತ್ತು ನೆಟ್ವರ್ಕ್ ಕಾರ್ಯನಿರ್ವಹಣೆಯಲ್ಲಿ ಯಾವುದೇ ತೆರನಾದ ತೊಂದರೆ ಆಗದಂತೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಶಿವಶಂಕರ. ಇಲಾಖೆಯ ಅತ್ಯಂತ ಪ್ರಮುಖ ಸಾಫ್ಟ್ವೇರ್ ಪೊಲೀಸ್ ಐಟಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರಿಂದ ರಾಜ್ಯದಲ್ಲಿ ಬೀದರ್ 2ನೇ ಸ್ಥಾನ ಪಡೆದಿದೆ. ಇದರಲ್ಲಿ ಚಿಮಕೋಡೆ ಕೊಡುಗೆ ಅಪಾರ. ಐಟಿ ಅನುಷ್ಠಾನ ಗುರುತಿಸಿ ಎಡಿಜಿಪಿ ಸಹ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕರ ಸೇವೆ ಮಾಡುವ ಧ್ಯೇಯದಿಂದ ಪೊಲೀಸ್ ಇಲಾಖೆ ಸೇರಿರುವೆ. ಮುಖ್ಯಮಂತ್ರಿ ಮೆಡಲ್ ಬಂದಿರುವುದು ಖುಷಿ ತರುವುದರ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಉತ್ತಮ ಕೆಲಸ ಮಾಡುವ ಹುಮ್ಮಸ್ಸು ನೀಡಿದೆ.
| ಶಿವಶಂಕರ ಚಿಮಕೋಡೆ, ಸಿಎಂ ಪದಕ ಪಡೆದ ಮುಖ್ಯ ಪೇದೆ