ಮುಖಭಂಗ ನನಗಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಿಗೆ: ಎಚ್.ಡಿ. ರೇವಣ್ಣ

29_HSN_04
Published on

ಹಾಸನ: ಹಾಸನ ನಗರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಸೋಲು ನನಗಾದ ಮುಖಭಂಗವಲ್ಲ, ಬದಲಿಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆದ ಮುಖಭಂಗ ಎಂದು ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ ಮೈತ್ರಿ ಬಗ್ಗೆ ಅಸಮಾಧಾನ ಹೊರಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿನಾ ಕಾಂಗ್ರೆಸ್‌ಗೆ ಅಡ ಇಟ್ಟಿದ್ದಾರೆ. ಅವಿಶ್ವಾಸ ನಿರ್ಣಯವನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದೇವು ಎಂಬುದರ ಬಗ್ಗೆ ನಮ್ಮ ಪಕ್ಷದ ಎಲ್ಲರೂ ಕುಳಿತುಕೊಂಡು ತೀರ್ಮಾನಿಸಿದ್ದೇವೆ. ಈಗಿನ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವಾಗ ನನಗೆ ಮೂರೇ ತಿಂಗಳು ಸಾಕು ಅಂದಿದ್ದರು. ಆದರೆ ಮೂರು ಹೋಗಿ ಆರು ತಿಂಗಳು ಕಳೆದರೂ ಅಧಿಕಾರ ಬಿಡಲಿಲ್ಲ. ಬೇಕಾದರೆ ಹಾಸನಾಂಬೆ ಮುಂದೆ ಸತ್ಯದ ಬಗ್ಗೆ ಆಣೆ ಮಾಡಲಿ ಎಂದು ಹೇಳಿದರು.

ಹಾಸನದಲ್ಲಿ ಕಾಂಗ್ರೆಸ್, ಬಿಜೆಪಿ ಒಟ್ಟಾಗಿ ನಡೆದುಕೊಂಡಿವೆ. ಎನ್‌ಡಿಎ ಜತೆ ಮೈತ್ರಿ ಇರುವ ಕಾರಣಕ್ಕೆ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದೆವು. ಈ ವಿಷಯವನ್ನು ಬಿಜೆಪಿಯ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೆ. ಈಗ ಬಿಜೆಪಿ ಕಾಂಗ್ರೆಸ್ ಜತೆ ಸೇರಿರುವುದು ನನಗೆ ಆದ ಮುಖಭಂಗವಲ್ಲ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಾಗಬೇಕು. ಬಿಜೆಪಿ-ಕಾಂಗ್ರೆಸ್ ಎರಡು ಸೇರಿ ಪ್ರಾದೇಶಿಕ ಪಕ್ಷದ ಮೇಲೆ ಸವಾಲು ಒಡ್ಡಿವೆ. ಆ ಸವಾಲನ್ನು ನಾವು ಸ್ವೀಕರಿಸುತ್ತೇವೆ. ನಮ್ಮ ಸದಸ್ಯರು ನಮ್ಮ ಪಕ್ಷದ ಗೌರವ ಉಳಿಸಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೇ ಹಾಸನದಲ್ಲಿ ಮಾತ್ರ ಬಿಜೆಪಿ-ಕಾಂಗ್ರೆಸ್ ಮೈತ್ರಿ ಇದೆ. ಕಾಂಗ್ರೆಸ್-ಬಿಜೆಪಿ ಜತೆ ಸೇರಿ ನಗರಸಭೆ ಅಧ್ಯಕ್ಷರು ಅದೇನ್ ಕಡಿದು ಕಟ್ಟೆ ಹಾಕ್ತಾರೆ ನೋಡೋಣ! ನಗರಸಭೆ ಅಧ್ಯಕ್ಷರ ವಿರುದ್ಧ ಕಾನೂನು ರೀತಿ ಹೇಗೆ ಪಾಠ ಕಲಿಸಬೇಕು ಕಲಿಸುತ್ತೇನೆ. ನಾನು ಮೂವತ್ತು ವರ್ಷ ರಾಜಕೀಯ ಮಾಡಿದ್ದೇನೆ. ಇಂತಹದ್ದನ್ನೆಲ್ಲಾ ನೋಡಿದ್ದೇನೆ. ಇದು ನನಗೆ ರಾಜಕೀಯ ಹಿನ್ನಡೆಯಲ್ಲ ಇದು ಬುನಾದಿ. ಆ ಅಧ್ಯಕ್ಷನಿಗೆ ಮಾನ, ಮರ್ಯಾದೆ, ಗೌರವ ಇದೆಯಾ! ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೆದರಲ್ಲ ಎಂದು ಗುಡುಗಿದರು.

ಬಿಜೆಪಿ ಜತೆ ನಮ್ಮ ಮೈತ್ರಿಯನ್ನು ಆ ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಎಲ್ಲಿಯವರೆಗೂ ಇರಿಸಿಕೊಳ್ಳುತ್ತಾರೆ ಅಲ್ಲಿಯವರೆಗೂ ಇರುತ್ತೇವೆ. ನಾವು ಅದಕ್ಕೆ ಬೇಧ ಭಾವ ಮಾಡುವುದಿಲ್ಲ. ಪಕ್ಷದೊಳಗೆ ಸರಿಪಡಿಸಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ನಗರಸಭೆಯಲ್ಲಿ 21 ಜನರು ಜೆಡಿಎಸ್‌ಗೆ ಮತ ಹಾಕಿದ್ದಾರೆ. ನಮ್ಮ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಜತೆ ನಾನು ಇರುತ್ತೇನೆ. ಕಾಂಗ್ರೆಸ್ ಜತೆ ಬಿಜೆಪಿ ಹೋದರೆ ನಾನೇನು ಮಾಡುವುದಕ್ಕೆ ಆಗುತ್ತದೆ? ಎಂದು ಪ್ರಶ್ನಿಸಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳ ನರಮೇಧ ವಿಚಾರವಾಗಿ ಮಾತನಾಡಿ, ಈ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಎಲ್ಲ ಧರ್ಮವನ್ನು ಸಮನಾಗಿ ನೋಡಬೇಕು. ಅಲ್ಲಿ ಯಾರೋ ಮುಸ್ಲಿಂ ಮಾಡಿದರೆ, ಇಲ್ಲಿ ಇರುವ ಮುಸ್ಲಿಮರು ಏನು ಮಾಡುತ್ತಾರೆ. ಕಾನೂನು ರೀತಿ ಏನಿದೆ ರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net