ಮುಕ್ತಿಧಾಮದ ಕಾಯಕಯೋಗಿ ಲಕ್ಷ್ಮಮ್ಮ

Untitled-7
Published on

ಬೆಂಗಳೂರು ಗ್ರಾಮಾಂತರ: ಶವಸಂಸ್ಕಾರವನ್ನೇ ವೃತ್ತಿಯಾಗಿ ಸ್ವೀಕರಿಸಿ ಅದರಲ್ಲೇ ಜೀವನದ ಬಂಡಿ ಎಳೆಯುತ್ತಿರುವ ದೊಡ್ಡಬಳ್ಳಾಪುರದ ಲಕ್ಷ್ಮಮ್ಮ ಎಂಬ ಗಟ್ಟಿಗಿತ್ತಿ ಇಲ್ಲಿನ ಮುಕ್ತಿಧಾಮದಲ್ಲಿನ ಕಾಯಕಯೋಗಿಯಾಗಿದ್ದಾರೆ. ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತೆಯಾಗಿರುವ ಲಕ್ಷ್ಮಮ್ಮ ಸುಮಾರು ವರ್ಷದಿಂದ ಇದೇ ಕಾಯಕದಲ್ಲಿ ನಿರತರಾಗಿದ್ದಾರೆ.
ಹಲವು ಜಾತಿ ಧರ್ಮದ ಶವಗಳ ಅಂತ್ಯ ಸಂಸ್ಕಾರವನ್ನು ಶಾಶ್ತ್ರೋಕ್ತವಾಗಿ, ವಿಧಿವಿಧಾನಗಳ ಮೂಲಕ ನೆರವೇರಿಸಿಕೊಂಡು ಬರುತ್ತಿರುವ ಲಕ್ಷ್ಮಮ್ಮ ಸಮಾಜದಲ್ಲಿ ಎಲೆಮರೆಕಾಯಿಯಂತಿದ್ದಾರೆ.
ಪತಿ ನಿಧನದ ಬಳಿಕ ಪೂರ್ಣ ಕೆಲಸ: ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ದೇವಾಂಗ ಮಂಡಳಿ ಮುಕ್ತಿಧಾಮದಲ್ಲಿ 2001 ರಿಂದ ಪತಿ ಉಮಾಶಂಕರ್ ಜತೆಗೆ ಲಕ್ಷ್ಮಮ್ಮ ವಾಸವಿದ್ದು, ಶವಸಂಸ್ಕಾರ ಕೆಲಸದಲ್ಲಿ ತೊಡಗಿದ್ದರು, ಆರಂಭದಲ್ಲಿ ಪತಿ ಮಾತ್ರ ಶವಸಂಸ್ಕಾರ ಮಾಡುತ್ತಿದ್ದರು, ಕಳೆದ 7ವರ್ಷದ ಹಿಂದೆ ಪತಿ ನಿಧನರಾದ ಮೇಲೆ ಶವಸಂಸ್ಕಾರ ಕಾಯಕವನ್ನೇ ಮುಂದುವರಿಸಿ ಜೀವನ ನಡೆಸುತ್ತಿದ್ದಾರೆ.
ಕರೊನಾದಲ್ಲಿ ಗಟ್ಟಿಗಿತ್ತಿ: ಕರೊನಾ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಶವಗಳ ದಹನಕ್ಕೆ ಇದ್ದದ್ದು, ಒಂದೇ ಮುಕ್ತಿಧಾಮ, ಕರೊನಾದಿಂದ ಮೃತ ವ್ಯಕ್ತಿಗಳ ಶವವನ್ನು ಮುಟ್ಟಲೂ ಹಿಂಜರಿಯುತ್ತಿದ್ದ ಕುಟುಂಬಸ್ಥರ ಪರಿಸ್ಥಿತಿಯಲ್ಲಿ ಮೃತ ದೇಹಗಳಿಗೆ ವಿಧಿವಿಧಾನಗಳಂತೆ ಸಂಸ್ಕಾರ ಮಾಡಿ ಮುಕ್ತಿ ಕಲ್ಪಿಸಿದ ಗಟ್ಟಿಗಿತ್ತಿ ಮಹಿಳೆ ಲಕ್ಷ್ಮಮ್ಮ.

2019-2020ರ ವೇಳೆಗೆ ಕೋವಿಡ್ ಮಹಾಮರಿ ಅಟ್ಟಹಾಸ ಹೆಚ್ಚಾಗಿ ಪ್ರತಿನಿತ್ಯ ಸಾವಿಗೀಡಾಗುವವರ ಸಂಖ್ಯೆ ಏರುತ್ತಲೆ ಇತ್ತು, ನಿತ್ಯ ಶವಗಳು ದಹನಕ್ಕೆ ಮುಕ್ತಿಧಾಮದ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದವು, ಈ ಸಂದರ್ಭದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ವರೆಗೆ ಸಹಜ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಮತ್ತೆ ಸಂಜೆ 5 ರಿಂದ ಮಧ್ಯರಾತ್ರಿ 12 ರಿಂದ 1 ಗಂಟೆವರೆಗೆ ದೇವಾಂಗ ಮಂಡಳಿ, ತಾಲೂಕು ಆಡಳಿತ, ನಗರಸಭೆ ಸಹಕಾರದೊಂದಿಗೆ ಲಕ್ಷ್ಮಮ್ಮ ನೂರಾರು ಶವ ಸಂಸ್ಕಾರ ನೆರವೇರಿಸಿದ್ದಾರೆ. ಇವರ ಸೇವೆಗೆ ಮೆಚ್ಚಿ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರನ್ನು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ.
ಐದು ಸಾವಿರಕ್ಕೂ ಹೆಚ್ಚು ಶವ ಸಂಸ್ಕಾರ: ಪ್ರತಿ ನಿತ್ಯ ಶವಗಳ ಸಂಸ್ಕಾರ ಮುಕ್ತಿಧಾಮದಲ್ಲಿ ಇವರಿಂದಲೇ ನಡೆಯುತ್ತಿರುತ್ತದೆ. ಒಂದು ಮೃತದೇಹ ಸಂಪೂರ್ಣವಾಗಿ ಸುಟ್ಟು ಬೂದಿಯಾಗಲು ಸುಮಾರು 6 ಗಂಟೆಗಳ ಸಮಯ ತಗುಲುತ್ತದೆ, ಅಂತ್ಯ ಸಂಸ್ಕಾರ ಮುಗಿದ ಕೂಡಲೇ ಬೂದಿಯನ್ನು ಎತ್ತಿ ಸಿಲಿಕಾನ್ ಪೆಟ್ಟಿಗೆ ಸ್ವಚ್ಚಗೊಳಿಸುವ ಮೂಲಕ ಮತ್ತೊಂದು ಶವಸಂಸ್ಕಾರಕ್ಕೆ ಅಣಿಯಾಗುತ್ತಾರೆ, ಇಲ್ಲಿಯವರೆಗೂ 5 ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕಲ್ಪಿಸಿದ್ದಾರೆ.

ದೇವಾಂಗ ಮಂಡಳಿಯ ವತಿಯಿಂದ ಆರಂಭವಾದ ಈ ಮುಕ್ತಿಧಾಮದಲ್ಲಿ ಆರಂಭದಿಂದಲೂ ಸಾವಿರಾರು ಮೃತದೇಹಗಳ ಸಂಸ್ಕಾರವನ್ನು ಅಚ್ಚುಕಟ್ಟಾಗಿ ನಡೆಸುಕೊಂಡು ಬಂದಿರುವುದು ಶ್ಲಾಘನೀಯ. ಈ ವಿಷಯದಲ್ಲಿ ಲಕ್ಷ್ಮಮ್ಮ ಗಟ್ಟಿಗಿತ್ತಿ ಮಹಿಳೆಯಾಗಿದ್ದಾರೆ.
ಎಂ.ಜಿ ಅಮರ್‌ನಾಥ್ ದೇವಾಂಗ ಮಂಡಳಿ ಕಾರ್ಯದರ್ಶಿ

ಕರೊನಾ ವೇಳೆ ಮೃತದೇಹಗಳನ್ನು ಕುಟುಂಬದವರೇ ಮುಟ್ಟದ ಸಂದರ್ಭದಲ್ಲಿ ನಮ್ಮ ಮಂಡಳಿಯವರು ಹೇಳಿದ ಸಮಯಕ್ಕೆ ಸರಿಯಾಗಿ ಲಕ್ಷ್ಮಮ್ಮ ರಾತ್ರಿ ಹಗಲೆನ್ನದೆ ಸಂಸ್ಕಾರ ನೆರವೇರಿಸಿದ್ದಾರೆ. ಅವರ ಕಾಯಕವನ್ನು ಎಷ್ಟು ಶ್ಲಾಸಿದರೂ ಕಡಿಮೆಯೇ.
ಅಖಿಲೇಶ್ ದೇವಾಂಗ ಮಂಡಳಿ ಖಜಾಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net