ಕೆಎಸ್ಒಯುದಲ್ಲಿ ಬೇಕಾಬಿಟ್ಟಿ ನೇಮಕ: ನ್ಯಾಯಾಂಗ ತನಿಖೆಗೆ ಶಿಫಾರಸು

KSOU-14
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ತಾತ್ಕಾಲಿಕ ಸಿಬ್ಬಂದಿ ನೇಮಕಾತಿ ಕುರಿತು ತನಿಖೆ ನಡೆಸಿರುವ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎನ್.ಆರ್.ನಿರಂಜನ ನೇತೃತ್ವದ ವಿಚಾರಣಾ ಸಮಿತಿಯು ತಮ್ಮ ವರದಿ ಸಲ್ಲಿಸಿದ್ದು, ನ್ಯಾಯಾಂಗ ತನಿಖೆಗೆ ಶಿಫಾರಸು ಮಾಡಿದೆ.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಈ ವರದಿಯನ್ನು ಹಸ್ತಾಂತರಿಸಿದ್ದು, ಇದರನ್ವಯ ಉನ್ನತ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. ಮುಂದಿನ ಬೆಳವಣಿಗೆಯನ್ನು ವಿವಿಯ ಸಿಬ್ಬಂದಿ, ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.

ಬಾಗಿಲಿಗೆ ನೋಟಿನ ಹಾರ ಹಾಕಿ ಪ್ರತಿಭಟನೆ

ಮಂಜೂರಾದ ಖಾಲಿ ಹುದ್ದೆಗಳಿಗಿಂತ ಅಧಿಕವಾಗಿ ತುಂಬಲಾಗಿರುವ ಹೆಚ್ಚುವರಿ ತಾತ್ಕಾಲಿಕ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಜತೆಗೆ, ಕಠಿಣ ಆರ್ಥಿಕ ಶಿಸ್ತನ್ನು ಜಾರಿಗೊಳಿಸುವ ಮೂಲಕ ವಿಶ್ವವಿದ್ಯಾಲಯದ ಆವರ್ತಕ ಆಡಳಿತಾತ್ಮಕ ವೆಚ್ಚವನ್ನು ಕಡಿತಗೊಳಿಸಬೇಕೆಂದು ರಾಜ್ಯ ಸರ್ಕಾರವು 2014ರ ಜೂನ್ 18ರಂದು ಆದೇಶಿಸಿತ್ತು. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯು ಮುಕ್ತ ವಿವಿಗೆ ಆದೇಶದ ಪ್ರತಿಯನ್ನು ಕಳುಹಿಸಿಕೊಟ್ಟಿತ್ತು.

ಜತೆಗೆ, ಮುಕ್ತ ವಿವಿಯ ವೇತನ ಅನುದಾನ ಕೋರಿಕೆಯನ್ನು ನಿರಾಕರಿಸಲಾಗಿದೆ ಎಂಬ ವಿಷಯವನ್ನೂ ತಿಳಿಸಲಾಗಿತ್ತು. ಆದರೂ ನಿರಂತರವಾಗಿರುವ ನಿಯಮಬಾಹಿರ ಅರೆಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಈ ಕ್ರಮವನ್ನು ಖಂಡಿಸಿ ಕರಾಮುವಿಯ ಕಾಯಂ ಸಿಬ್ಬಂದಿ ನಿಕಟಪೂರ್ವ ಕುಲಸಚಿವ ಡಾ.ಕೆ.ಬಿ.ಪ್ರವೀಣ ಕೊಠಡಿ ಬಾಗಿಲಿಗೆ ನೋಟಿನ ಹಾರ ಹಾಕಿ ಪ್ರತಿಭಟನೆ ನಡೆಸಿದ್ದರು. ಇದು ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು.

ಪ್ರೊ.ಎನ್.ಆರ್.ನಿರಂಜನ ಸಮಿತಿಯಿಂದ ತನಿಖೆ:

ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 21ರಂದು ವಿಶ್ರಾಂತ ಕುಲಪತಿ, ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎನ್.ಆರ್.ನಿರಂಜನ ಅವರನ್ನು ತನಿಖೆಗೆ ನಿಯೋಜಿಸಿ, ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅವರು ಅಗತ್ಯ ಮಾಹಿತಿ ಕಲೆಹಾಕಿದ್ದರು. ಜತೆಗೆ, ಸಂಬಂಧಿಸಿದ ಅಧಿಕಾರಿಗಳು, ನೌಕರರೊಂದಿಗೆ ಸಮಾಲೋಚಿಸಿದ್ದರು.

ಇದನ್ನು ಆಧರಿಸಿ ವರದಿಯನ್ನು ತಯಾರಿಸಿ ಪೂರಕ ದಾಖಲೆಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರು.

ಈ ವರದಿ ಆಧರಿಸಿ ಆಡಳಿತಾತ್ಮಕ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್ ಎತ್ತಂಗಡಿ ಮಾಡಿ, ಅವರ ಮಾತೃ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗಕ್ಕೆ ವಾಪಸ್ ಕಳುಹಿಸಲಾಗಿದೆ. ಅವರ ಜಾಗಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಕೆ.ನವೀನ್‌ಕುಮಾರ್ ಅವರನ್ನು ನಿಯೋಜಿಸಲಾಗಿದೆ.

ಕರಾಮುವಿ ಅಧಿಕಾರಿಗಳ ವಿರುದ್ಧ ಬಂದಿರುವ ಆರೋಪಗಳನ್ನು ವಿಚಾರಣಾ ಸಮಿತಿ ಗಂಭೀರವಾಗಿ ಪರಿಗಣಿಸಲಾಗಿದೆ. ಮೇಲ್ನೋಟಕ್ಕೆ ಲೋಪ, ನಿಯಮ ಉಲ್ಲಂಘನೆ ನಡೆದಿರುವುದು ಪತ್ತೆಯಾಗಿದೆ. ಜತೆಗೆ, ಕರಾಮುವಿಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ನ್ಯಾಯಾಂಗ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸರ್ಕಾರಕ್ಕೆ ಪ್ರೊ.ನಿರಂಜನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ವಿವಿಗೆ ದೊಡ್ಡ ಆರ್ಥಿಕ ಹೊರೆ

ಅನೇಕ ಆರೋಪಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಬೇಕಾಬಿಟ್ಟಿಯಾಗಿ ತಾತ್ಕಾಲಿಕ ಸಿಬ್ಬಂದಿ ನೇಮಕಾತಿ, ಭ್ರಷ್ಟಾಚಾರವೇ ಮುಖ್ಯ ವಿಷಯವಾಗಿದೆ. ಸರ್ಕಾರದ ಆರ್ಥಿಕ ಅನುದಾವಿಲ್ಲದೆ ಆಂತರಿಕ ಸಂಪನ್ಮೂಲದಿಂದಲೇ ಕಾರ್ಯನಿರ್ವಹಿಸುತ್ತಿರುವ ಕರಾಮುವಿವಿಗೆ 709 ಹುದ್ದೆಗಳು ಮಂಜೂರಾಗಿವೆ.

ಇದರಲ್ಲಿ 342 ಹುದ್ದೆಗಳು ಭರ್ತಿಯಾಗಿವೆ. 367 ಹುದ್ದೆಗಳು ಖಾಲಿ ಇವೆ. ಇಷ್ಟೇ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲು 1,379 ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದ್ದು, 1,012 ಸಿಬ್ಬಂದಿ ಅನಗತ್ಯವಾಗಿದ್ದಾರೆ. ವರ್ಷಕ್ಕೆ ಈ ಎಲ್ಲ ಸಿಬ್ಬಂದಿಗೆ ವೇತನಕ್ಕಾಗಿ 69.83 ಕೋಟಿ ರೂ. ಮತ್ತು ಪಿಂಚಣಿಗಾಗಿ 9.16 ಕೋಟಿ ರೂ. ಸೇರಿದಂತೆ 79 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದು ವಿವಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.

ಲೋಕಾಯುಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಜತೆಗೆ, ಮಂಜೂರಾಗಿರುವ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕ ಹುದ್ದೆಗಳಿರುವುದು 10 ಮಾತ್ರ. ಆದರೆ, ಅನಾವಶ್ಯಕವಾಗಿ 36 ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಿದ್ದು, 41 ಪ್ರಾದೇಶಿಕ ನಿರ್ದೇಶಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಾದೇಶಿಕ ನಿರ್ದೇಶಕ ನೇಮಕಾತಿ ನ್ಯಾ.ಭಕ್ತವತ್ಸಲ ವರದಿಯಲ್ಲಿ ಉಲ್ಲೇಖವಾಗಿದ್ದು, ನಗರದ ಲೋಕಾಯುಕ್ತ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದೆ.

ನಷ್ಟ ವಸೂಲಾತಿಗೆ ತಪ್ಪಿತರಸ್ಥರ ವಿರುದ್ಧ ಇಲಾಖಾ ವಿಚಾರಣೆ ಮಾಡಲಾಗಿದೆ. ಆದರೂ, ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರು, ಹೆಚ್ಚುವರಿ ಸಿಬ್ಬಂದಿ ಈಗಲೂ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ ಎಂಬುದು ಪ್ರಮುಖ ದೂರಾಗಿದೆ.

ಮಂಡಕಳ್ಳಿ ಕಟ್ಟಡಕ್ಕೆ ಕಡಿಮೆ ಬಾಡಿಗೆ ನಿಗದಿ

ಮೈಸೂರು ವಿಮಾನ ನಿಲ್ದಾಣದ ಬಳಿ ಮಂಡಕಳ್ಳಿಯಲ್ಲಿ 10 ಎಕರೆಯಲ್ಲಿರುವ ಕರಾಮುವಿಯ 18 ಸಾವಿರ ಚ.ಅಡಿಯ ವಿಶಾಲವಾದ ಕಟ್ಟಡವನ್ನು ಅತಿ ಕಡಿಮೆ ದರಕ್ಕೆ ಬಾಡಿಗೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಆಸ್ತಿ ಮಾರ್ಗಸೂಚಿ ದರ ಪ್ರಕಾರ ಈ ಕಟ್ಟಡ ಬಾಡಿಗೆಯನ್ನು ತಿಂಗಳಿಗೆ 14.50 ಲಕ್ಷ ರೂ. ನಿಗದಿ ಪಡಿಸಿದೆ.

ಆದರೆ, ಇದೇ ತಿಂಗಳ ಬಾಡಿಗೆ ದರವನ್ನು ಒಂದು ವರ್ಷಕ್ಕೆ ನಿಗದಿ ಪಡಿಸಿ 30 ವರ್ಷದ ವರೆಗೂ ಭೋಗ್ಯಕ್ಕೆ ನೀಡಲಾಗಿದೆ. ವರ್ಷಕ್ಕೆ ಬರೋಬ್ಬರಿ 1.59 ಕೋಟಿ ರೂ. ಖೋತಾ ಆಗಿದೆ ಎಂದು ಕರಾಮುವಿ ಕಾಯಂ ಬೋಧಕೇತರರು, ಬೋಧಕರು ದೂರು ನೀಡಿದ್ದರು. ಈ ಕುರಿತು ಪ್ರೊ.ನಿರಂಜನ ವಿಚಾರಣಾ ಸಮಿತಿ ಸಮಗ್ರವಾಗ ಪರಿಶೀಲನೆ ನಡೆಸಿದೆ.

ಯುಜಿಸಿ ಮಾರ್ಗಸೂಚಿ ಉಲ್ಲಂಘನೆ

ಕರಾಮುವಿ ರಾಜ್ಯಾದ್ಯಂತ ತೆರೆದಿರುವ 127 ಅಧ್ಯಯನ ಕೇಂದ್ರಗಳಲ್ಲೂ ದಾಖಲಾತಿ ಅವಕಾಶ ಕಲ್ಪಿಸಿ, ಶುಲ್ಕದಲ್ಲಿ ಶೇ.15ರಷ್ಟು ಹಣವನ್ನು ಹಂಚಿಕೆ ಮಾಡಿ ಯುಜಿಸಿ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿದೆ ಎಂಬುದು ಮತ್ತೊಂದು ಆರೋಪ.

ವಿವಿ ಕೇಂದ್ರ ಕಚೇರಿ, ಪ್ರಾದೇಶಿಕ ಕೇಂದ್ರಗಳಲ್ಲಿ ಮಾತ್ರ ದಾಖಲಾತಿ ಪ್ರಕ್ರಿಯೆ ನಡೆಯಬೇಕು. ಆದರೆ, ಅಧ್ಯಯನ ಕೇಂದ್ರದಲ್ಲಿ ಬರೀ ಪ್ರವೇಶಾತಿ ಕುರಿತು ಸಮಾಲೋಚನೆ, ಅರಿವು ಮೂಡಿಸುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ದಾಖಲಾತಿಗೆ ಅವಕಾಶ ಕಲ್ಪಿಸಿಕೊಟ್ಟು ಆರ್ಥಿಕ ನಷ್ಟಕ್ಕೆ ಉಂಟು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net