ಮುಕ್ತ ವಿವಿ ಕುಲಪತಿ ಸ್ಥಾನಕ್ಕೆ ಲಾಬಿ

KSOU
Published on

ಮೈಸೂರು: ಮೈಸೂರು ಕೇಂದ್ರಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಲಾಬಿ ಶುರುವಾಗಿದೆ. ಆಕಾಂಕ್ಷಿಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ಅರ್ಜಿ ಸಲ್ಲಿಕೆಗೆ ಅ. 27 ಕೊನೆಯ ದಿನವಾಗಿದೆ.


ಕೆಎಸ್‌ಒಯು ಕುಲಪತಿಯಾಗಿದ್ದ ಪ್ರೊ.ಎಸ್.ವಿದ್ಯಾಶಂಕರ್ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿಯೋಜನೆಗೊಂಡಿದ್ದಾರೆ. ಇದರಿಂದಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಮುಕ್ತ ವಿವಿ ಕುಲಪತಿ ಸ್ಥಾನ ಖಾಲಿ ಆಗಿದೆ.


ಆಡಳಿತ ನಿರ್ವಹಣೆಗೆ ಅಡ್ಡಿ:
ಇದರೊಂದಿಗೆ ಆಡಳಿತಾತ್ಮಕ ಕುಲಸಚಿವ ಹುದ್ದೆಯೂ ಖಾಲಿ ಇದೆ. ಹಣಕಾಸು ಅಧಿಕಾರಿ ಡಾ.ಎ.ಖಾದರ್‌ಪಾಷ್ ಅವರಿಗೆ ಈ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕುಲಪತಿ ಮತ್ತು ಕುಲಸಚಿವ ಸ್ಥಾನ ಏಕಕಾಲಕ್ಕೆ ಖಾಲಿ ಆಗಿರುವುದು ಆಡಳಿತ ನಿರ್ವಹಣೆಗೆ ತೊಡಕಾಗಿದೆ. ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಸ ಕುಲಪತಿ ಬರುವ ವರೆಗೂ ಇದೇ ರೀತಿ ಅನಿಶ್ಚಿತತೆ ಮುಂದುವರಿಯಲಿದೆ.


ಈ ನಡುವೆ, ಮುಕ್ತ ವಿವಿ ಕುಲಪತಿ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ರಾಜಭವನ ಅರ್ಜಿ ಆಹ್ವಾನಿಸಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿಗಳು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮ 1992ರನ್ವಯ ಕನಿಷ್ಠ 10 ವರ್ಷಗಳ ಕಾಲ ಪ್ರಾಧ್ಯಾಪಕ ಅಥವಾ ತತ್ಸವಾನ ಹುದ್ದೆಯ ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.


ಕುಲಪತಿ ನೇಮಕಾತಿ ಕುರಿತು ಹಿರಿಯ ಶಿಕ್ಷಣ ತಜ್ಞರನ್ನು ಒಳಗೊಂಡ ಶೋಧನಾ ಸಮಿತಿಯನ್ನು ರಚನೆ ಮಾಡಲಿದ್ದು, ಸಲ್ಲಿಕೆ ಆಗುವ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಮೂವರ ಹೆಸರನ್ನು ಶಿಫಾರಸು ಮಾಡಲಿದೆ. ಇದರಲ್ಲಿ ಒಬ್ಬರನ್ನು ಕುಲಪತಿಗೆ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಒಂದು ತಿಂಗಳು ಹಿಡಿಯಲಿದೆ. ನವೆಂಬರ್ ಅಂತ್ಯಕ್ಕೆ ಮುಕ್ತ ವಿವಿಗೆ ಹೊಸ ವಿಸಿ ಬರುವ ನಿರೀಕ್ಷೆ ಇದೆ.


ಚಟುವಟಿಕೆ ಬಿರುಸು:

ಕುಲಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಅರ್ಜಿ ಸಲ್ಲಿಸುವ ಅವಧಿ ಮುಕ್ತಾಯವಾದ ಬಳಿಕ ತೆರೆಮರೆ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳಲಿದೆ. ರಾಜಕೀಯ ಪ್ರಭಾವ, ಜಾತಿ ಮತ್ತು ಹಣ ಬಲ ಸಹ ಹೆಚ್ಚು ಕೆಲಸ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net