

ಮೈಸೂರು: ದೇಶದಲ್ಲಿ ಮುಕ್ತ ಕಲಿಕೆ ಮತ್ತು ದೂರ ಶಿಕ್ಷಣಕ್ಕೆ (ಒಡಿಎಲ್)ಹೆಚ್ಚಿನ ಬೇಡಿಕೆ ಇದೆ. ಇದನ್ನು ಪರಿಣಾಮಕಾರಿ ಬಳಕೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಂಶೋಧನಾ ವಿಭಾಗದ ಜಂಟಿ ನಿರ್ದೇಶಕ ಡಾ.ಅಮರೇಂದ್ರ ಪಾಣಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಸಮಾಕಾಲೀನ ಜಾಗತಿಕ ಸನ್ನಿವೇಶದಲ್ಲಿ ಮುಕ್ತ, ದೂರ ಶಿಕ್ಷಣದ ಪ್ರಸ್ತುತತೆ ಮತ್ತು ಭವಿಷ್ಯದ ದೃಷ್ಟಿಕೋನಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಭಾರತದಲ್ಲಿ ಸುಮಾರು 1700 ದೂರ ಹಾಗೂ ಮುಕ್ತ ಶಿಕ್ಷಣ ನೀಡುವ ಕೇಂದ್ರಗಳಿವೆ. ದೆಹಲಿಯಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ರಾಷ್ಟ್ರ ಮಟ್ಟದಲ್ಲಿ ಕಾರ್ಯಚಟುವಟಿಕೆ ಒಳಗೊಂಡಿದೆ. ಇದರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 1 ಕೋಟಿ ತಲುಪಿದೆ. ಕರಾಮುವಿದಲ್ಲಿ 1 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇದು ದೂರ, ಮುಕ್ತ ಶಿಕ್ಷಣಕ್ಕೆ ಎಷ್ಟು ಬೇಡಿಕೆ ಇದೆ ಎಂಬುದಕ್ಕೆ ಸಾಕ್ಷಿ. ಇದು ಕಲಿಯುವವರಿಗೆ ಪ್ರಸಕ್ತವಾಗಿದೆ ಎಂದರು.
ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯು ಬಹಳ ಸವಾಲು ಎದುರಿಸಬೇಕಾಗುತ್ತದೆ. ಇದು ಸಹ ಭಾರತದಂತಹ ವೈವಿಧ್ಯ ಹೊಂದಿರುವ ದೇಶದಲ್ಲಿ ಇನ್ನೂ ಹೆಚ್ಚಿನ ಸವಾಲುಗಳಿವೆ.
ನಮ್ಮಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಸಂಸ್ಕೃತಿ, ಭಾಷೆ, ಬದುಕಿನ ಶೈಲಿ ಬದಲಾವಣೆಯಾಗುತ್ತದೆ. ಜತೆಗೆ ಪ್ರಕೃತಿಯಲ್ಲೂ ವೈವಿಧ್ಯತೆ ಇದೆ. ಕಡಲ ಕಿನಾರೆಗಳು, ಪ್ರಸ್ಥಭೂಮಿ, ಮರಳುಗಾಡು, ದಟ್ಟ ಅರಣ್ಯ ಪ್ರದೇಶ, ಎತ್ತರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿರುವ ಜನರಿಗೆ ಶಿಕ್ಷಣ ತಲುಪಿಸಬೇಕಾಗಿದೆ. ಇದು ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಈ ಎಲ್ಲ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಒಡಿಎಲ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಬೇಕಿದೆ ಎಂದರು.
ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯಲು ಬರುವವರು ಮಾಮೂಲಿ ಕಾಲೇಜು ವಿದ್ಯಾರ್ಥಿಗಳಂತಲ್ಲ. ಕೆಲಸ ಮಾಡುತ್ತಾ, ಮದುವೆಯಾಗಿ ಮನೆಯಲ್ಲಿ ಗೃಹ ಕೆಲಸ ಮಾಡುತ್ತಾ, ಉದ್ಯಮ ನಿರ್ವಹಿಸುತ್ತಾ ಇರುವ ವಿವಿಧ ವಯೋಮಾನದವರು ಕಲಿಯಲು ಬರುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಈ ವ್ಯವಸ್ಥೆ ರೂಪಿಸಿದರೆ ಕಲಿಯುವವರಲ್ಲೂ ಆಸಕ್ತಿ ಹೆಚ್ಚಾಗುತ್ತದೆ. ಇದರಿಂದ ಒಡಿಎಲ್ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆಯೂ ವೃದ್ಧಿಯಾಗಲಿದೆ ಎಂದರು.
ಶಿಕ್ಷಣ ವ್ಯವಸ್ಥೆಯು ತರಗತಿ ಕೇಂದ್ರೀತವಾಗದೆ ವಿದ್ಯಾರ್ಥಿ ಕೇಂದ್ರಿತವಾಗುತ್ತಿದೆ. ಡಿಜಿಟಲ್ ಮಾದರಿಯಲ್ಲಿ ಕುಳಿತ್ತಲೇ ವಿದ್ಯಾರ್ಥಿಗಳು ಪಾಠ ಕೇಳಬಹುದು. ತಮ್ಮ ಕೋರ್ಸ್‌ನ ಅವಧಿ ಮುಗಿದ ಮೇಲೆ ಅವರಿಗೆ ಅನುಕೂಲವಾಗುವಂತಹ ಸಮಯದಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದು. ಅದು ಸಹ ಡಿಜಿಟಲ್ ಮಾದರಿಯಲ್ಲೇ ಇರುತ್ತದೆ. ಇಂತಹದನ್ನು ಗಮನಿಸಿದರೆ ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯೂ ಸಮಕಾಲೀನ ಸಂದರ್ಭಕ್ಕೆ ಒಗ್ಗಿಕೊಂಡು ಹೋಗುತ್ತಿದೆ ಎಂದರು.
ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಿಇಎಂಸಿಎ ನಿರ್ದೇಶಕ ಡಾ.ಬಿ.ಶ್ಯಾಡ್ರಕ್, ರಾಯಪುರದ ಹೇಮಚಂದ ಯಾದವ್ ವಿವಿಯ ಕುಲಪತಿ ಪ್ರೊ.ಸಂಜಯ ತಿವಾರಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕೆಎಸ್‌ಒಯು ಕುಲಸಚಿವರಾದ ಪ್ರೊ.ಎಸ್.ಕೆ. ನವೀನ್ ಕುಮಾರ್, ಡಾ.ಸಿ.ಎಸ್.ಆನಂದಕುಮಾರ್, ಡೀನ್ ಪ್ರೊ.ಎಂ.ರಾಮನಾಥಮ್ ನಾಯ್ಡು, ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ ಡಾ.ಜಿ. ನಟರಾಜು ಇದ್ದರು.