

ತಾಳಗುಪ್ಪ: ಹೋಬಳಿಯ ಹಂಸಗಾರು, ಹೊಸಹಳ್ಳಿ, ಮರಹಾನ್ಕುಳಿ, ಹಿರೇಮನೆ, ಬೆಳ್ಳಣ್ಣೆ ಮುಂತಾದ ಗ್ರಾಮಗಳಲ್ಲಿ ಗುರುವಾರ ಸಂಜೆ 6.50ರಿಂದ 7.30ರವರೆಗೆ ಸುರಿದ ಮೇಘಸ್ಫೋಟದಂತಹ ಮಳೆಯಾಗಿದ್ದು ಜನಜೀವನ ತತ್ತರಿಸಿ ಹೋಗಿದೆ.
ಏಕಾಏಕಿ ಸುರಿದ ಮಳೆಯಿಂದ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು ಮರತ್ತೂರು ಗ್ರಾಪಂನಲ್ಲಿ ಇರಿಸಿದ್ದ ಮಳೆಮಾಪನದಲ್ಲಿ 110 ಮಿ.ಮೀ. ಮಳೆ ಮುಕ್ಕಾಲು ಗಂಟೆಯಲ್ಲಿ ದಾಖಲಾಗಿದೆ. ಗುಡ್ಡದಿಂದ ಮಣ್ಣಿನ ರಾಶಿ ಕೊಚ್ಚಿಕೊಂಡು ಬಂದಿದ್ದು ಹಲವಾರು ಊರಿನ ರಸ್ತೆಗಳು ಮಣ್ಣಿನ ಗುಪ್ಪೆಯಾಗಿ ಪರಿವರ್ತನೆಯಾಗಿದೆ. ಮರಹಾನ್ಕುಳಿ ಗ್ರಾಮದ ಗಣಪತಿ ಎಂಬುವವರ ಅಡುಗೆ ಮನೆಯಲ್ಲಿ ಅರ್ಧ ಅಡಿ ಕೆಸರು ಸೇರಿಕೊಂಡಿದೆ. ಹೊಸಳ್ಳಿ ಗ್ರಾಮದಿಂದ ಮತ್ತೇಕೇರಿಗೆ ತೆರಳುವ ಸೇತುವೆ ಹರ್ಷ ಹಿಂಡೂಮನೆ ಅವರ ಮನೆ ಬಳಿ ಎರಡೂ ಕಡೆ ಕಾಂಪೌಂಡ್ ಕುಸಿದು ಸಂಚಾರ ಬಂದ್ ಆಗಿದೆ. ಸ್ಥಳಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಬಂದು ಸೂಕ್ತ ರೀತಿ ಪರಿಹಾರ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ. ಈ ಮಳೆ ಕೇವಲ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸುರಿದಿದ್ದು ಅದರಾಚೆ ಮಳೆಯ ಯಾವ ಕುರುಹು ಇಲ್ಲದಿರುವುದು ಆಶ್ಚರ್ಯ ತಂದಿದೆ.