

ಗದಗ: ಮುಂಬೈ- ಗದಗ ರೈಲಿನ ಮೂಲಕ ಜೂನ್ 2ರಂದು ನಗರಕ್ಕೆ ಆಗಮಿಸಿರುವ ಮುಳಗುಂದ ಪಟ್ಟಣದ ದಂಪತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
59 ವರ್ಷದ ಪುರುಷ ಪಿ 5383 ಹಾಗೂ 49 ವರ್ಷದ ಮಹಿಳೆ ಪಿ 5384 ವರದಿಗಳು ಭಾನುವಾರ ಪಾಸಿಟಿವ್ ಬಂದಿವೆ. ಜೂ. 2ರಂದು ನಗರದ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದ 114 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ನಲ್ಲಿ ಇರಿಸಿತ್ತು. ಅವರಲ್ಲಿ ಇಬ್ಬರ ವರದಿಗಳು ಪಾಸಿಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಎಲ್ಲೆಲ್ಲಿ ನಿಯಂತ್ರಿತ, ಬಫರ್ ಜೋನ್
ರೋಣ ತಾಲೂಕಿನ ಹೊಳೆಆಲೂರ ಗ್ರಾಮದ 28 ವರ್ಷದ ಪುರುಷ, ಗದಗನ ಕಳಸಾಪುರ ರಸ್ತೆ ಸೇವಾಲಾಲ ನಗರದ 32 ವರ್ಷದ ಪುರುಷ, ಪಂಚಾಕ್ಷರಿ ನಗರದ 29 ವರ್ಷದ ವೈದ್ಯರೊಬ್ಬರಿಗೆ ಶನಿವಾರ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಾಲ್ಕು ಪ್ರದೇಶಗಳನ್ನು ಕಂಟೇನ್ಮೆಂಟ್ ಹಾಗೂ ನಾಲ್ಕು ಪ್ರದೇಶಗಳನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ.
ಗದಗನ ವಾರ್ಡ್ 28ರ ಪಂಚಾಕ್ಷರಿ ನಗರದ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ (ಕಂಟೇನ್ಮೆಂಟ್) ಪ್ರದೇಶವೆಂದು ಹಾಗೂ ಸುತ್ತಲಿನ 5 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ಆಯುಕ್ತ ಮನ್ಸೂರ್ ಅಲಿ ಅವರನ್ನು ಇನ್ಸಿಂಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
ಗದಗ ವಾರ್ಡ್ 35ರ ಸೇವಾಲಾಲ ನಗರದ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ ಹಾಗೂ ಸುತ್ತಲಿನ 5 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ವತಗಲ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.
ರೋಣ ತಾಲೂಕಿನ ಹೊಳೆಆಲೂರ ಗ್ರಾಮ ಪಂಚಾಯಿತಿ ವಾರ್ಡ್ 8ರ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ ಹಾಗೂ ಸುತ್ತಲಿನ 7 ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ರೋಣ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡರ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಇಲ್ಲಿಲ್ಲ ನಿಯಮದಲ್ಲಿ ಸಡಿಲಿಕೆ:
ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶ ನಿರ್ಬಂಧಿಸಿದೆ. ಬಫರ್ ಜೋನ್ನ ಮೊದಲ ಒಂದು ಕಿ.ಮೀ. ವ್ಯಾಪ್ತಿಯ ಪ್ರತಿ ಮನೆಯಲ್ಲೂ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಯಂತ್ರಿತ ವಲಯಗಳಲ್ಲಿ ದಿನಸಿ, ಹಾಲು, ಮಾಂಸ, ಔಷಧ ಸೇರಿ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ಇಲ್ಲಿ ಉರುಸು, ಜಾತ್ರೆ, ಮೆರವಣಿಗೆ, ಜನ ಗುಂಪು ಸೇರುವಿಕೆ, ಸಭೆ ಅಥವಾ ಮದುವೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಿತ ಇಲಾಖೆಗಳ ಮೂಲಕವೇ ಪಡೆಯಬೇಕು. ಈ ಪ್ರದೇಶಗಳ ಜನರು ಮನೆ ಬಿಟ್ಟು ಹೊರಗೆ ತಿರುಗುವುದನ್ನು ನಿಷೇಧಿಸಲಾಗಿದೆ. ಈ ಪ್ರದೇಶಗಳ ಎಲ್ಲ ಶಾಲೆ, ಕಾಲೇಜು, ಕಚೇರಿಗಳನ್ನು ಮುಚ್ಚಲು, ಜನಗುಂಪು ಸೇರುವಿಕೆ, ಕರ್ತವ್ಯ ನಿರತ ವಾಹನ ಹೊರತುಪಡಿಸಿ ಉಳಿದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಕಂಟೇನ್ಮೆಂಟ್, ಬಫರ್ ಜೋನ್ ಮತ್ತು ಕ್ಲಸ್ಟರ್ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಕರ್ತವ್ಯ ನಿಗದಿಪಡಿಸಿದ್ದು, ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶಿಸಲಾಗಿದೆ.
ಮುಂಬೈನಿಂದ 65 ಜನರ ಆಗಮನ
ಗದಗ: ಮುಂಬೈ- ಗದಗ ಎಕ್ಸ್ಪ್ರೆಸ್ ರೈಲಿನ ಮೂಲಕ ಭಾನುವಾರ 65 ಪ್ರಯಾಣಿಕರು ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು.
ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಅವರ ಆರೋಗ್ಯ ತಪಾಸಣೆ ಮಾಡಲಾಯಿತು. ಗದಗ ಜಿಲ್ಲೆಯ 25 ಜನರನ್ನು ಅಧಿಕಾರಿಗಳು ವಾಹನಗಳ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು.
ಬೆಳಗಾವಿ, ಹಾವೇರಿ, ಧಾರವಾಡ, ಬಳ್ಳಾರಿ ಜಿಲ್ಲೆಯ 40 ಜನರನ್ನು ಆಯಾ ಜಿಲ್ಲಾಡಳಿತದೊಂದಿಗೆ ರ್ಚಚಿಸಿ ಕಳಿಸಿಕೊಡಲಾಯಿತು.
ಮಗು ಮಡದಿ ಕಂಡು ಭಾವುಕ:
ಬಳ್ಳಾರಿ ಜಿಲ್ಲೆ ಹೊಸಪೇಟೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬರ ಪತ್ನಿ ಹಾಗೂ 4 ವರ್ಷದ ಪುತ್ರ ಲಾಕ್ಡೌನ್ಗೂ ಮುಂಚೆ ಮುಂಬೈನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಲಾಕ್ಡೌನ್ ಪರಿಣಾಮ ಮೂರು ತಿಂಗಳು ಅಲ್ಲಿಯೇ ವಾಸವಾಗಿದ್ದರು. ಭಾನುವಾರ ಅವರು ರೈಲು ನಿಲ್ದಾಣಕ್ಕೆ ಬಂದಿಳಿದರು. ನಿಲ್ದಾಣದ ಹೊರಗಡೆ ಕಾಯುತ್ತ ನಿಂತಿದ್ದ ಪತಿ, ಮಗು ಹಾಗೂ ಮಡದಿಯನ್ನು ಕಂಡು ಕೆಲ ಕಾಲ ಭಾವುಕರಾದರು.
ಮುಂಬೈನಲ್ಲಿ ಉಪನ್ಯಾಸಕರಾಗಿರುವ ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಮೂರು ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು.ಲಾಕ್ಡೌನ್ ವೇಳೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡಿದ್ದ ಅವರು ರೈಲಿನ ಮೂಲಕ ನಗರಕ್ಕೆ ಬಂದಿಳಿದರು. ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಿಂದ ಬಂದಿದ್ದ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು.
ಕಳೆದ ಆರು ದಿನಗಳಲ್ಲಿ 430 ಜನರು ಗದಗ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇವರಲ್ಲಿ ದಾವಣಗೆರೆ, ಶಿವಮೊಗ್ಗ, ಧಾರವಾಡ, ಕೊಪ್ಪಳ, ಬಳ್ಳಾರಿ, ಕಾರವಾರ ಜಿಲ್ಲೆಯವರೂ ಸೇರಿದ್ದಾರೆ.
ಸೋಂಕುಮುಕ್ತ 7 ಜನರ ಬಿಡುಗಡೆ
ಕೋವಿಡ್-19 ಸೋಂಕಿನಿಂದ ಗುಣವಾದ ಒಟ್ಟು 7 ಜನರನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಜಿಮ್್ಸ) ಕೋವಿಡ್-19 ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಮಾಡಲಾಗಿದೆ.
ಪಿ-972, ಪಿ-1179, ಪಿ-1307, ಪಿ-1744, ಪಿ-1746, ಪಿ-1747 ಹಾಗೂ ಪಿ-1763 ರೋಗಿಗಳು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಲಿದ್ದಾರೆ. ಅವರ ಮೇಲೆ ಆರೋಗ್ಯ ಕಾರ್ಯಕರ್ತರು ನಿರಂತರ ನಿಗಾವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.