ಮುಂಬೈನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಎವಿಜಿಸಿ ಪ್ರಾರಂಭ: ಸಚಿವ ಎಲ್.ಮುರುಗನ್

mysore
Published on

ಮೈಸೂರು: ಸೃಜನಾತ್ಮಕ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಮುಂಬೈನಲ್ಲಿ ‘ನ್ಯಾಷನಲ್ ಸ್ಕೂಲ್ ಆಫ್ ಎವಿಜಿಸಿ’ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಪ್ರಾರಂಭಿಸಲಾಗುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಖಾತೆ ಸಚಿವ ಎಲ್.ಮುರುಗನ್ ತಿಳಿಸಿದರು.

ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ನಗರದ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ರಿಯೇಟಿವ್ ಎಕಾನಮಿ ಭಾರತದ ಭವಿಷ್ಯ. ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್‌ಎಫ್‌ಡಿಸಿ) ಮುಖಾಂತರ ದೇಶದ ಮನರಂಜನಾ ಉದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದೆ. ಐಐಟಿ, ಐಐಎಂ ಮಾದರಿಯಲ್ಲಿ ಸಿನಿಮಾದ ಪೂರ್ವ ಮತ್ತು ನಂತರ ಚಿತ್ರೀಕರಣದಲ್ಲಿ(ಫ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್) ಕೌಶಲ, ವೃತ್ತಿಪರತೆ ಮತ್ತು ಪರಿಣಿತಿ ಕಲ್ಪಿಸಿಕೊಡಲು ಈ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು, ಚೆನ್ನೈ, ಮುಂಬೈನಲ್ಲೇ ಬಾಲಿವುಡ್‌ನ ಅನೇಕ ಸಿನಿಮಾಗಳ ಫ್ರೀ, ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ನಡೆಯುತ್ತಿದೆ. ಅಷ್ಟರ ಮಟ್ಟಿಗೆ ಅಂತಾರಾಷ್ಟ್ರೀಯ ಮಾನದಂಡದ ವ್ಯವಸ್ಥೆ ದೇಶದಲ್ಲೇ ರೂಪಗೊಂಡಿದೆ. ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಕಾಲೇಜು ಸ್ಥಾಪನೆಯಾಗಲಿದ್ದು, ತಾಂತ್ರಿಕ ಪರಿಣಿತರು, ಕೌಶಲಗಾರರನ್ನು ಸೃಷ್ಟಿಸಲು ಇದು ನೆರವಾಗಲಿದೆ ಎಂದರು.

ದೇಶದ ಯಾವುದೇ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡುವ ಸಲುವಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಸಿನಿಮಾ ಚಿತ್ರೀಕರಣ ಮಾಡಲು ಅರಣ್ಯ, ಪೊಲೀಸ್, ರೈಲ್ವೆ, ಸೇನೆ ಸೇರಿದಂತೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯುವುದನ್ನು ತಪ್ಪಿಸಿದೆ ಎಂದರು.

ಸಿನಿಮಾ, ಮನರಂಜನಾ ಕ್ಷೇತ್ರದಲ್ಲಿ ಆರ್ಥಿಕತೆ ಉತ್ತೇಜನ ಮತ್ತು ಉದ್ಯೋಗಾವಕಾಶ ಸೃಷ್ಟಿಗಾಗಿ ಕಾರ್ಯಪಡೆಯೊಂದು ರಚನೆ ಮಾಡಲಾಗಿದೆ. ಈ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ, ಕೌಶಲ ಆಧಾರಿತ ಕೆಲಸದ ಅವಕಾಶ ಹೆಚ್ಚಿಸಲು ಇದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಪ್ಯಾನ್ ಇಂಡಿಯಾ ಸಿನಿಮಾಗಳು ಎಲ್ಲ ಗಡಿ ಮೀರಿ ಬೆಳವಣಿಗೆ ಕಾಣುವ ಮೂಲಕ ಎಲ್ಲ ಪ್ರದೇಶಗಳ ಸಿನಿಮಾ ಪ್ರೇಕ್ಷಕರನ್ನು ತಲುಪಿವೆ. ಕನ್ನಡದ ಕಾಂತಾರಾ, ಆರ್‌ಆರ್‌ಆರ್, ಬಾಹುಬಲಿ, ಪುಷ್ಪಾದಂತಹ ಪ್ರಾದೇಶಿಕ ಭಾಷಾ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಹೆಸರು ತಂದುಕೊಟ್ಟಿವೆ. ಜತೆಗೆ, ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾ, ಒಒಟಿ ವೇದಿಕೆ, ಮನರಂಜನೆ, ಗೇಮಿಂಗ್, ಅನಿಮೇಷನ್, ಸಾಮಾಜಿಕ ಜಾಲತಾಣದಂತಹ ಕ್ಷೇತ್ರಗಳು ತ್ವರಿತವಾಗಿ ಮತ್ತು ಬೃಹದಾಕಾರವಾಗಿ ಪ್ರಗತಿ ಕಾಣುತ್ತಿವೆ. ಇದು ಆರ್ಥಿಕ ಚಲನೆಗೆ ದೊಡ್ಡ ಕಾಣಿಕೆ ನೀಡಿದೆ. ಇದರೊಂದಿಗೆ ಅನೇಕ ಸಮಸ್ಯೆ ಮತ್ತು ಸವಾಲು ಎದುರಾಗಿವೆ ಎಂದರು.

ಪ್ರಸ್ತುತ ಒಟಿಟಿ ಯುಗದಲ್ಲಿ ಸಿನಿಮಾ ಉದ್ಯಮವು ಹಿಂದೆಂದಿಗಿಂತಲೂ ಹಲವಾರು ಪಟ್ಟು ಬೆಳವಣಿಗೆಯನ್ನು ಅತಿ ಕಡಿಮೆ ಅವಧಿಯಲ್ಲಿ ಸಾಧಿಸಲಿದ್ದು, ಈ ಸಂದರ್ಭದಲ್ಲಿ ಇದು ಸಮಾಜದ ಹಿತ ಮತ್ತು ದೇಶದ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡೇ ಮುನ್ನಡೆಯಬೇಕು ಎಂದರು.

ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್‌ಟೈನ್ಮೆಂಟ್ ಸಮ್ಮಿಟ್ ಅನ್ನು 2019ರಲ್ಲಿ ಘೋಷಣೆ ಮಾಡಿದ್ದರು. ಈ ವರ್ಷ ಅದು ನಡೆಯಲಿದೆ. ಎಲ್ಲ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು. ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ ಎಂದರು.

ಭಾರತ ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲಿ ಕಥೆಗಳ ಆಗರವೆನಿಸಿದೆ. ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದೆ ಎಂದರು.

ಕಾವೇರಿ ಸಮೂಹ ಸಂಸ್ಥೆಯ ಅಧ್ಯಕ್ಷ, ಮೈಸೂರು ಸಿನಿಮಾ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್, ಕಾರ್ಯದರ್ಶಿ ಪದ್ಮಾವತಿ ಎಸ್.ಭಟ್, ಉದ್ಯಮಿ ಎಂ.ಜಗನ್ನಾಥ್ ಶೆಣೈ ಇದ್ದರು.

ಬಾಕ್ಸ್

ಸಿನಿಮಾ ಚಿತ್ರೀಕರಣ ಹಬ್ ಆಗುತ್ತಿದೆ ಮೈಸೂರು

ಸಿನಿಮಾ ಚಿತ್ರೀಕರಣ ಹಬ್ ಆಗಿ ಮೈಸೂರು ಪರಿವರ್ತನೆಯಾಗುತ್ತಿದೆ. ಬೆಂಗಳೂರಿಗೆ ಕಾರ್ಯ ಒತ್ತಡ ಅಧಿಕವಾಗಿದೆ. ಸಿನಿಮಾ ಸೊಸೈಟಿ ನೆರವಿನಿಂದ ಸಿನಿಮಾ ಚಿತ್ರೀಕರಣಗಳು ಮೈಸೂರು ಭಾಗದಲ್ಲಿ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಈ ರೀತಿ ಪೂರಕ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಸಾಕ್ಷೃಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ತಯಾರು ಮಾಡಬೇಕು. ಆಗಲೇ ಖ್ಯಾತ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಮತ್ತು ಪ್ರಶಸ್ತಿ ಪಡೆದುಕೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಜತೆಗೆ, ಜಾಗತಿಕ ಮನ್ನಣೆಯೂ ದೊರೆಯಲಿದೆ ಎಂದು ಸಿನಿಮಾ ನಟ, ನಿರ್ಮಾಪಕ ಸುನೀಲ್ ಪುರಾಣಿಕ್ ಹೇಳಿದರು.

ಬಹುತೇಕ ಸಿನಿಮಾ ನಿರ್ದೇಶಕರ ಸಿನಿಯಾನ ಸಾಕ್ಷೃಚಿತ್ರಗಳ ಮೂಲಕವೇ ಶುರುವಾಗಿರುತ್ತದೆ. ಯುವ ನಿರ್ದೇಶಕರು ಸಹ ಉತ್ತಮ, ವಿಭಿನ್ನ ಕಥೆ ಇಟ್ಟುಕೊಂಡು ಸಾಕ್ಷೃಚಿತ್ರವನ್ನು ತಯಾರು ಮಾಡಬೇಕು. ಇದು ಯಶಸ್ಸು ತಂದುಕೊಡಲಿದೆ. ಆದರೆ, ಪ್ರಶಸ್ತಿಯೇ ಅಂತಿಮವಲ್ಲ, ಅದು ಗೆಲುವಿನ ಮೊದಲ ಮೆಟ್ಟಿಲು ಅಷ್ಟೇ ಎಂದರು.

ಬಾಕ್ಸ್

26 ಪ್ರಶಸ್ತಿಗಳ ಘೋಷಣೆ

ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ದೇಶಗಳಿಂದ ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. ಒಟ್ಟು 26 ಪ್ರಶಸ್ತಿಗಳನ್ನು ಘೋಷಿಸಲಾಯಿತು.

*5

ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಕಿರುಚಿತ್ರೋತ್ಸವ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲ್.ಮುರುಗನ್,ಸುನೀಲ್ ಪುರಾಣಿಕ್, ಡಾ.ಜಿ.ಆರ್.ಚಂದ್ರಶೇಖರ್, ಪದ್ಮಾವತಿ ಎಸ್.ಭಟ್, ಎಂ.ಜಗನ್ನಾಥ್ ಶೆಣೈ ಇದ್ದರು.

*6

ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಖಾತೆ ಸಚಿವ ಎಲ್.ಮುರುಗನ್ ಮಾತನಾಡಿದರು.ಸುನೀಲ್ ಪುರಾಣಿಕ್, ಡಾ.ಜಿ.ಆರ್.ಚಂದ್ರಶೇಖರ್, ಪದ್ಮಾವತಿ ಎಸ್.ಭಟ್, ಎಂ.ಜಗನ್ನಾಥ್ ಶೆಣೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net