

ಕಲಬುರಗಿ: ಹೊಟ್ಟೆ ಪಾಡಿಗಾಗಿ ಜಿಲ್ಲೆಯ ವಿವಿಧೆಡೆಯಿಂದ ಮಹಾರಾಷ್ಟ್ರಕ್ಕೆ ತೆರಳಿರುವ 100ಕ್ಕೂ ಹೆಚ್ಚು ಕಾರ್ಮಿಕರು ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ, ನೀರಿಲ್ಲದೆ ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.
ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದರಿಂದ ಮಹಾರಾಷ್ಟ್ರದಲ್ಲಿ ಆತಂಕ ಮನೆ ಮಾಡಿದೆ. ಇಂಥದರಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಕಮಲಾಪುರ, ಚಿತ್ತಾಪುರ, ಜೇವರ್ಗಿ ಸೇರಿ ವಿವಿಧ ತಾಲೂಕಿನ ಜನರು ಮುಂಬಯಿಗೆ ತೆರಳಿ ಅಂಧೇರಿಯಲ್ಲಿ ವಾಸವಾಗಿದ್ದಾರೆ.
ದಿನದ ದುಡಿಮೆಯಿಂದ ಬಂದ ಕೂಲಿ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಯಾವಾಗ ಕರೊನಾ ಲಗ್ಗೆ ಇಟ್ಟಿತೋ ಆಗಿನಿಂದ ಇವರಿಗೆ ಸಂಕಟದ ದಿನಗಳು ಶುರುವಾದವು. ಲಾಕ್ಡೌನ್ ಬಳಿಕ ದುಡಿಯಲು ಕೆಲಸ ಇಲ್ಲದಾಯಿತು. ಇದ್ದ ಅಲ್ಪಸ್ವಲ್ಪ ಹಣದಲ್ಲಿ ಸ್ವಲ್ಪ ದಿನ ಸಾಗಹಾಕಿದ ಈ ಜನರು ತಮ್ಮೂರಿಗೂ ತೆರಳಲಾಗದೆ, ಅಲ್ಲೂ ಉಳಿಯಲು ಸಾಧ್ಯವಾಗದೆ ಉಪವಾಸ ಬೀಳುವಂತಾಗಿದೆ. ಇನ್ನು ಹೊರಬಂದರೆ ಪೊಲೀಸರ ಲಾಠಿ ಏಟು ತಿನ್ನಬೇಕಿದೆ. ಹೀಗಾಗಿ ಮಕ್ಕಳು, ವೃದ್ಧರು, ಮಹಿಳೆಯರು ಊಟವಿಲ್ಲದೆ ಪರದಾಡುತ್ತಿದ್ದಾರೆ.
ಅಂಧೇರಿಯಲ್ಲಿ ಸಿಲುಕಿರುವ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮದ ಮಹೇಂದ್ರ (77180 27339) ಎಂಬ ಯುವಕ ವಿಜಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾನೆ. ಸರ್, ನಾವು 6 ಜನ ಅಂಧೇರಿಯಲ್ಲಿ ಉಳಿದಿದ್ದೇವೆ. ಆರಂಭದ ಕೆಲದಿನ ಇಲ್ಲಿನ ಸಕರ್ಾರ ಊಟ ಸೇರಿ ಅಗತ್ಯ ಸೌಕರ್ಯ ನೀಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸೌಕರ್ಯ ಸಿಗುತ್ತಿಲ್ಲ. ಊಟವೂ ಇಲ್ಲದೆ, ಕೆಲಸವೂ ಇಲ್ಲದೆ ಉಪವಾಸ ವನವಾಸ ಅನುಭವಿಸುವಂತಾಗಿದೆ. ದಯವಿಟ್ಟು ನಮ್ಮೂರಿಗೆ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾನೆ.
ಠಾಣೆ ಎಂಬ ನಗರದಲ್ಲಿ ಸಿಲುಕಿರುವ ಯಾದಗಿರಿ ಜಿಲ್ಲೆಯ ಸುಮಾರು 100 ಜನರು ಸಹ ಯಾವುದೇ ಸೌಕರ್ಯವಿಲ್ಲದೆ ಯಾತನಾಮಯ ಜೀವನ ಸಾಗಿಸುತ್ತಿದ್ದಾರೆ. ಎರಡು ತಿಂಗಳಿಂದ ಮನೆ ಬಾಡಿಗೆ ನೀಡಲು ಸಹ ಆಗುತ್ತಿಲ್ಲ. ಮನೆ ಮಾಲೀಕರು ಬಾಡಿಗೆ ಕೇಳುತ್ತಿದ್ದಾರೆ. ಆದರೆ ನಮ್ಮಲ್ಲಿ ನಯಾಪೈಸೆ ಹಣ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ಸಂಸದ ಡಾ.ಉಮೇಶ ಜಾಧವ್ ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಮಹಾರಾಷ್ಟ್ರದಲ್ಲಿ ಸಿಲುಕಿರುವ ಜಿಲ್ಲೆಯ ಜನರನ್ನು ಕರೆತರಲು ಕ್ರಮ ಕೈಗೊಳ್ಳಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.
ಮಹಾರಾಷ್ಟ್ರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ನಮ್ಮ ಸಂಸದರ ಕಚೇರಿಯಲ್ಲಿ 30 ಸಿಬ್ಬಂದಿ ನಿರಂತರ ಕೆಲಸದಲ್ಲಿ ತೊಡಗಿದ್ದು, ಜಿಲ್ಲಾಧಿಕಾರಿ ಜತೆ ಸಂಪರ್ಕದಲ್ಲಿದ್ದೇನೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಕನ್ನಡಿಗರು, ಕಾಮರ್ಿಕರು ಆತಂಕಕ್ಕೆ ಒಳಗಾಗಬಾರದು.
| ಡಾ.ಉಮೇಶ ಜಾಧವ್ ಸಂಸದ
ನಾನು ಜೀವಣಗಿ ಗ್ರಾಮದವ. ಅಂಧೇರಿಯ ಖಾಸಗಿ ಕಂಪನಿಯೊಂದರಲ್ಲಿ ವಾಚ್ಮನ್ ಕೆಲಸ ಮಾಡುತ್ತಿದ್ದೆ. ಆದರೆ ಒಂದು ತಿಂಗಳಿಂದ ಕಂಪನಿ ಬಂದ್ ಆಗಿದೆ. ಇತ್ತ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಜೀವನ ನಡೆಸುವುದು ದುಸ್ತರವಾಗಿದೆ. ಮನೆಯ ಬಾಡಿಗೆ ಕಟ್ಟಲು ಸಹ ಹಣ ಇಲ್ಲ. ಸ್ವಗ್ರಾಮಕ್ಕೆ ತೆರಳಲು ಸೂಕ್ತ ವ್ಯವಸ್ಥೆ ಮಾಡಬೇಕು.
| ಕರಬಸಪ್ಪ
ತೊನಸನಹಳ್ಳಿ ನಿವಾಸಿ