

ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಡಾ.ಉಮೇಶ ಜಾಧವ್ ಮನವಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ- ಬೆಂಗಳೂರು ಮಧ್ಯೆ ಹೊಸ ರೈಲು ಸಂಚಾರಕ್ಕೆ ಕ್ರಮ, ವಂದೇ ಭಾರತ್ ಎಕ್ಸ್ಪ್ರೆಸ್ ಕಲಬುರಗಿವರೆಗೂ ವಿಸ್ತರಣೆ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಸಂಸದ ಡಾ.ಉಮೇಶ ಜಾಧವ್ ಒತ್ತಾಯಿಸಿದರು.
ಈ ಕುರಿತು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಮುಂಬೈ- ಸೋಲಾಪುರ ವಂದೇ ಭಾರತ್ ಎಕ್ಸ್ಪ್ರೆಸ್ ಕಲಬುರಗಿಗೆ ವಿಸ್ತರಿಸಬೇಕು, ಅಥವಾ ಕಲಬುರಗಿ- ಬೆಂಗಳೂರ ಮಧ್ಯೆ ವಂದೇ ಭಾರತ್ ಓಡಿಸಬೇಕು. ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದು, ಈಗಿರುವ ರೈಲುಗಳಿಂದ ಸೂಕ್ತ ಸೇವೆ ಸಿಗುತ್ತಿಲ್ಲ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ರೈಲು ಓಡಿಸಬೇಕು ಎಂದು ಆಗ್ರಹಿಸಿದರು.
ಶಹಾಬಾದ್ನಲ್ಲಿ ಕೋವಿಡ್ಗಿಂತಲೂ ಮುಂಚೆ ನಿಲ್ಲುತ್ತಿದ್ದ ಚನ್ನೆÊ- ಎಗ್ಮೋರ್, ಕೋನಾರ್ಕ್, ಮುಂಬೈ- ಹೈದರಾಬಾದ್, ಹೈದರಾಬಾದ್- ವಿಜಯಪುರ ರೈಲುಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಕಮಲಾಪುರ ನಿಲ್ದಾಣದಲ್ಲಿ ಜಾಲನಾ- ತಿರುಪತಿ, ಸೋಲಾಪುರ- ಮುಂಬೈ, ಸೋಲಾಪುರ- ತಿರುಪತಿ ರೈಲುಗಳನ್ನು ನಿಲ್ಲಿಸಬೇಕು. ಸೋಲಾಪುರ- ಕಲಬುರಗಿ, ಗುಂತಕಲ್ ಡೆಮೋ, ಸಿಕಂದರಾಬಾದ್- ಚಿತ್ತಾಪುರ ಮೆಮೋ, ಫಲಕನಾಮಾ- ವಾಡಿ, ಕಾಚಿಗುಡಾ ಎಕ್ಸ್ಪ್ರೆಸ್ಗಳ ಸಂಚಾರ ಮರು ಆರಂಭಿಸಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕಲಬುರಗಿ-ಬೆಂಗಳೂರು ಮಧ್ಯೆ ಶೀಘ್ರದಲ್ಲಿ ಹೊಸ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದ ಬೇಡಿಕೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.