ಮುಂದುವರೆದ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರ

16 YERRISWAMY 07
Published on

ಬಳ್ಳಾರಿ : ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಲ್ಲಿನ ಬಿಮ್ಸ್ ಆವರಣದಲ್ಲಿ ನಡೆಯುತ್ತಿರುವ ರೆಸಿಡೆಂಟ್ ಡಾಕ್ಟರ್ಸ್‌ ಅಸೋಸಿಯೇಷನ್ ಮುಷ್ಕರ ಶುಕ್ರವಾರ ಮುಂದುವರೆದಿದೆ.
ಜಿಲ್ಲಾಧ್ಯಕ್ಷ ಡಾ.ಎನ್.ಸಿ. ಮಂಜುನಾಥ ಮಾತನಾಡಿ, ಮಹಾರಾಷ್ಟ್ರ, ಗುಜರಾಜ್, ಪಂಜಾಬ್ ರಾಜ್ಯಗಳಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ 80 ಸಾವಿರ ರೂ, ದ್ವಿತೀಯ ವರ್ಷಕ್ಕೆ 90 ಸಾವಿರ ರೂ, ತೃತೀಯ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಶಿಷ್ಯ ವೇತನವನ್ನು ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಈ ವಿದ್ಯಾರ್ಥಿಗಳು ಪಡೆಯುತ್ತಿರುವ ಶಿಷ್ಯವೇತನದಲ್ಲಿ ಕೇವಲ ಶೇ.33 ರಷ್ಟು ಅಂದರೆ ಪ್ರಥಮ ವರ್ಷಕ್ಕೆ 45 ಸಾವಿರ, ದ್ವಿತೀಯ ವರ್ಷಕ್ಕೆ 50 ಸಾವಿರ, ತೃತೀಯ ವರ್ಷಕ್ಕೆ 55 ಸಾವಿರ ರೂ. ಶಿಷ್ಯ ವೇತನ ನೀಡಲಾಗುತ್ತಿದೆ. ಮೇಲಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕವೂ ಜಾಸ್ತಿ ಇದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಿ, ಶಿಷ್ಯ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕೋಲ್ಕತ್ತಾದಲ್ಲಿ ದ್ವಿತೀಯ ವರ್ಷದ ವೈದ್ಯಕೀಯ ಪಿಜಿ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ, ಶನಿವಾರದಂದು ಹೊರರೋಗಿಗಳಿಗೆ ಬಿಮ್ಸ್ ನಲ್ಲಿ ಚಿಕಿತ್ಸೆ ಸೇವೆ ನೀಡದಂತೆ ಪ್ರತಿಭಟಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net