

ಚಿಕ್ಕಮಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯೆ, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಗುರುವಾರ ದಾಳಿ ಮಾಡಿದ ಐಟಿ ಅಧಿಕಾರಿಗಳು ಶುಕ್ರವಾರವೂ ದಾಖಲೆಗಳ ಪರಿಶೀಲನೆ ನಡೆಸಿದರು. ನಗರದ ಎಂ.ಜಿ.ರಸ್ತೆ ಹೂವಿನ ಮಾರುಕಟ್ಟೆ ಸಮೀಪದ ನಿವಾಸ, ಗಾಯತ್ರಿ ಶಾಂತೇಗೌಡ ಅವರಿಗೆ ಸಂಬಂಧಪಟ್ಟ ಕೆಲವು ಸ್ಥಳಗಳಲ್ಲಿ ಶೋಧ ನಡೆಸಿದರು.
ತಿರುಪತಿಗೆ ತೆರಳಿರುವ ಗಾಯತ್ರಿ ಶಾಂತೇಗೌಡ ಅವರು ಇನ್ನೂ ಮನೆಗೆ ಆಗಮಿಸಿಲ್ಲ ಎನ್ನಲಾಗಿದೆ. ಶುಕ್ರವಾರ ಗಾಯತ್ರಿ ಶಾಂತೇಗೌಡ ಅವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರ ನಿವಾಸದ ಮುಂದಿನ ರಸ್ತೆಯ ಎರಡೂ ಕಡೆ ಪೊಲೀಸರು ಬಂದ್ ಮಾಡಿದ್ದರು.
ಸಾರ್ವಜನಿಕರು ಓಡಾಡದಂತೆ ಎರಡೂ ಕಡೆ ಬ್ಯಾರಿಕೇಡ್ ಹಾಕಿದ್ದಾರೆ. ಐಟಿ ಅಧಿಕಾರಿಗಳ ದಾಳಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಎಸ್ಪಿಗೆ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು. ಐಟಿ ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.