ಮುಂದುವರಿದ ವರ್ತಕರ ಮುಷ್ಕರ

h28- Merchants
Published on

ಹುಬ್ಬಳ್ಳಿ: ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಗೆ ಆಕರಣೆ ಮಾಡುತ್ತಿರುವ ಸೆಸ್ ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿ ಆರಂಭಿಸಲಾಗಿರುವ ವ್ಯಾಪಾರಸ್ಥರ ಅನಿರ್ದಿಷ್ಟ ಮುಷ್ಕರ ಮಂಗಳವಾರವೂ ಮುಂದುವರಿಯಿತು.

ಅಮರಗೋಳ ಎಪಿಎಂಸಿ ಆವರಣದ ದಿನಸಿ, ಕಾಳುಕಡಿ ಸೇರಿ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ತರಕಾರಿ, ಹೂ, ಹಣ್ಣು, ಉಳ್ಳಾಗಡ್ಡಿ ವ್ಯಾಪಾರ ಮಾತ್ರ ಎಂದಿನಂತೆ ನಡೆಯಿತು.

ಎರಡು ದಿನದಿಂದ ವ್ಯಾಪಾರ ವಹಿವಾಟು ಬಂದ್ ಆಗಿರುವುದರಿಂದ ರೈತರು ಉತ್ಪನ್ನ ತಂದರೂ ಖರೀದಿ ಪ್ರಕ್ರಿಯೆ ನಡೆಯದೇ ಸಮಸ್ಯೆ ಎದುರಿಸಿದರು.

ವರ್ತಕರ ಸಭೆ: ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ವ್ಯಾಪಾರಸ್ಥರ ಸಂಘದಲ್ಲಿ ಆಹಾರ ಧಾನ್ಯ ವರ್ತಕರು, ಆಲೂಗಡ್ಡೆ-ಉಳ್ಳಾಗಡ್ಡಿ ವರ್ತಕರು, ಇತರ ವರ್ತಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಸಭೆ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ರಾಜ್ಯದ ಎಲ್ಲ ಎಪಿಎಂಸಿ ವರ್ತಕರ ಅಭಿಪ್ರಾಯ ಪಡೆದು ಮುಷ್ಕರ ಆರಂಭಿಸಲಾಗಿದೆ. ಇದೀಗ ಬೆಂಗಳೂರು ಸೇರಿ ಕೆಲವೆಡೆ ವ್ಯಾಪಾರ ವಹಿವಾಟು ಪುನರಾರಂಭ ಮಾಡಲಾಗಿದೆ ಎಂಬ ಮಾಹಿತಿ ಇದೆ. ಹಾಗೆಂದು ನಾವೆಲ್ಲ ವಿಚಲಿತರಾಗುವುದು ಬೇಡ. ಇಲ್ಲಿ ಮುಷ್ಕರ ಮುಂದುವರಿಸುವ ಬಗ್ಗೆ ಮತ್ತೊಮ್ಮೆ ಎಲ್ಲರ ಅಭಿಪ್ರಾಯ ಪಡೆಯೋಣ ಎಂದರು.

ಜುಲೈ 29ರಂದು ಮಧ್ಯಾಹ್ನ 2.30ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ತುರ್ತು ಸಭೆ ನಡೆಸಲಾಗುವುದು. ಸಭೆಗೆ ಈ ಭಾಗದ ಎಲ್ಲ ವರ್ತಕರನ್ನು ಆಹ್ವಾನಿಸಿ ರ್ಚಚಿಸೋಣ ಎಂದರು. ಇದಕ್ಕೆ ಎಲ್ಲ ವರ್ತಕರು ಒಪ್ಪಿಗೆ ಸೂಚಿಸಿದರು.

ಎಪಿಎಂಸಿ ಸದಸ್ಯ ಚನ್ನು ಹೊಸಮನಿ ಮಾತನಾಡಿ, ರಾಜ್ಯದ ಎಲ್ಲ ಎಪಿಎಂಸಿ ವರ್ತಕರು ಸೆಸ್ ರದ್ದುಗೊಳಿಸಲು ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದಾರೆ. ಈಗ ಅದನ್ನು ಮೊಟಕುಗೊಳಿಸುವುದು ಸರಿಯಲ್ಲ. ಎಲ್ಲರ ಅಭಿಪ್ರಾಯ ಪಡೆದು ಮುಂದುವರಿಯುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ ಮಾತನಾಡಿ, ‘ಸರ್ಕಾರ ಸೆಸ್ ವಿಧಿಸುವಾಗ ಹೊರಗೆ- ಒಳಗೆ ವ್ಯಾಪಾರ ಮಾಡುವವರು ಎಂದು ಭೇದ ಭಾವ ಮಾಡದೇ ಎಲ್ಲರಿಗೂ ಏಕರೂಪ ಕಾನೂನು ಜಾರಿ ಮಾಡಬೇಕು. ಇಬ್ಬಗೆ ನೀತಿ ಸರಿಯಲ್ಲ’ ಎಂದರು.

ಸಂಘದ ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಮಲ್ಲಿಕಾರ್ಜುನ ಬೋರಟ್ಟಿ, ಸುರೇಶ ಹಬೀಬ, ಬಸವರಾಜ ಅರಳೀಕಟ್ಟಿ, ರಾಜಣ್ಣ ಬತ್ಲಿ, ರಾಜಶೇಖರ ವಾಲಿ, ಮೋಹನ ಸೋಳಂಕಿ, ಶ್ರೀಕಾಂತ ಮಹಲೆ, ಗಣೇಶ ಕಟಾರಿಯಾ, ಎಸ್.ಎಸ್. ಹೊಸಕಟ್ಟಿ, ರಾಜಕಿರಣ ಮೆಣಸಿನಕಾಯಿ, ಪ್ರಕಾಶ ಸಾಂಬ್ರಾಣಿ, ಶಿವನಗೌಡ ಪಾಟೀಲ, ರುದ್ರಪ್ಪ ಬೆಟಗೇರಿ, ಬಿ.ಜಿ. ಹೊಸಗೌಡ್ರ, ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷರ ಮನವಿ: ಕರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರು ಈಗಾಗಲೇ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ದಿಸೆಯಲ್ಲಿ ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ವರ್ತಕರು ಮುಷ್ಕರ ನಡೆಸಬೇಕು. ವ್ಯಾಪಾರ ವಹಿವಾಟು ಎಂದಿನಂತೆ ನಡೆಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ವ್ಯಾಪಾರಸ್ಥರಿಗೆ ಸಲಹೆ ನೀಡಿದ್ದಾರೆ. ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿದ ಅವರು, ರೈತರ ಹಿತದೃಷ್ಟಿಯಿಂದ ಸಾಂಕೇತಿಕ ಮುಷ್ಕರ ನಡೆಸಿ ವ್ಯಾಪಾರ ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net