

ಮುಳಬಾಗಿಲು: ಒಂದೇ ಕುರ್ಚಿಗೆ ಇಬ್ಬರು ಬಿಇಒಗಳ ಕಿತ್ತಾಟ ಸೋಮವಾರವೂ ಮುಂದುವರಿಯುವ ಲಕ್ಷಣ ಕಾಣುತ್ತಿದೆ.
ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಬಿಇಒ ಕಚೇರಿ ಸಿಬ್ಬಂದಿ ಸೇರಿ ಶಿಕ್ಷಕರು ಗೊಂದಲದಲ್ಲೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೆಇಟಿಯಿಂದ ಆದೇಶ ಪತ್ರ ಪಡೆದು ಬಂದಿರುವ ಈ ಹಿಂದಿನ ಬಿಇಒ ಡಿ.ಗಿರಿಜೇಶ್ವರಿದೇವಿ ಶುಕ್ರವಾರ ಬಿಇಒ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸಿದರಲ್ಲದೆ ಬಿಆರ್‌ಪಿ ಮತ್ತು ಸಿಆರ್‌ಪಿಗಳ ಜತೆ ೆಟೋ ತೆಗೆಸಿಕೊಂಡು ನಾನೇ ಬಿಇಒ ಎಂದು ತಿಳಿಸಿದ್ದಾರೆ.
ಕೋಲಾರ ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮುಳಬಾಗಿಲು ಪ್ರಭಾರಿ ಬಿಇಒ ಆಗಿ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ಮುಂದುವರಿದಿದ್ದಾರೆ. ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ 14 ನೋಡಲ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ಕಾರ್ಯ ಮಾಡಬೇಕಿದೆ. ಒಟ್ಟು 62 ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು, 3024 ವಿದ್ಯಾರ್ಥಿಗಳು ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಲು ಸಜ್ಜುಗೊಂಡಿದ್ದಾರೆ.
ಮುಳಬಾಗಿಲಿನ ಬಿಇಒ ಕಚೇರಿಯ ಎಲ್ಲ ಘಟನೆಗಳು ಪ್ರತಿದಿನ ಡಿಡಿಪಿಐ ಕಚೇರಿಗೆ ರವಾನೆಯಾಗುತ್ತಿದ್ದು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ವರದಿ ಹೋಗುತ್ತಿದ್ದರೂ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಈ ಮಧ್ಯೆ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ವೆಂಕಟಗಿರಿಯಪ್ಪ, ಪದಾಧಿಕಾರಿಗಳಾದ ಓಬಳರೆಡ್ಡಿ, ಎಚ್.ಭಾಸ್ಕರ್‌ರೆಡ್ಡಿ, ಜೆ.ಎಸ್.ಮಂಜುನಾಥ್ ಡಿ.18ರಂದು ತ್ಯಾಗರಾಜ ಕಾಲನಿಯ ಮನೆಗೆ ನುಗ್ಗಿ ಜಾತಿನಿಂದನೆ, ದೌರ್ಜನ್ಯ ಮಾಡಿದ್ದಾರೆ ಎಂದು ಬಿಇಒ ಡಿ.ಗಿರಿಜೇಶ್ವರಿದೇವಿ ಜ.29ರಂದು ಬೆಂಗಳೂರಿನ ಸಿಆರ್ ಸೆಲ್‌ಗೆ ದೂರು ನೀಡಿದ್ದು, ಅಲ್ಲಿಂದ ಮುಳಬಾಗಿಲು ಪೊಲೀಸರಿಗೆ ಕೇಸ್ ವರ್ಗಾವಣೆಯಾದ ಪರಿಣಾಮ ಫೆ.18ರಂದು ಮುಳಬಾಗಿಲು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ.
ವಾರದಿಂದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಬಗ್ಗೆ ತರಬೇತಿ ನೀಡುವ ಜತೆಗೆ ಪರೀಕ್ಷೆ, ಮೌಲ್ಯಮಾಪನ ಮಾಡಿ ಇಲಾಖೆಗೆ ಫಲಿತಾಂಶ ನೀಡಬೇಕು ಎಂಬ ಸೂಚನೆ ನೀಡಲಾಗಿದೆ. ಅದರಂತೆ 62 ಪ್ರೌಢಶಾಲೆಗಳಿಗೆ 7 ಮಾರ್ಗಗಳಲ್ಲಿ ನೋಡಲ್ ಅಧಿಕಾರಿಗಳು ಸುರಕ್ಷಿತವಾಗಿ ಪ್ರಶ್ನೆ ಪತ್ರಿಕೆ ತಲುಪಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಿ.ಆರ್.ಅಶೋಕ್, ಪ್ರಭಾರ ಬಿಇಒ, ಮುಳಬಾಗಿಲು ಕೆಇಟಿ ನ್ಯಾಯಾಲಯದ ಆದೇಶದಂತೆ ಗುರುವಾರದಿಂದ ನಾನೇ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅದರಂತೆ ಸೋಮವಾರವೂ ಕಾರ್ಯನಿರ್ವಹಿಸುತ್ತೇನೆ. ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಡಿ.ಗಿರಿಜೇಶ್ವರಿದೇವಿ, ಬಿಇಒ ಮುಳಬಾಗಿಲು