

ಚಿತ್ರದುರ್ಗ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಮುಷ್ಕರ ಶುಕ್ರವಾರ ಮುಂದುವರಿದಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ ಸೆಂಟರ್‌ನಲ್ಲಿ ಪರ್ಯಾಯ ವ್ಯವಸ್ಥೆಯೊಂದಿಗೆ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಕೇಂದ್ರದ ಉಸ್ತುವಾರಿ ವೈದ್ಯ ಡಾ.ಪ್ರಕಾಶ್ ತಿಳಿಸಿದರು. ಇಂದು ಸಿಬ್ಬಂದಿ ಹಿಂಪಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಮುಷ್ಕರ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಸೆಂಟರ್‌ನಲ್ಲಿ 2 ತಾಸು ವಿಳಂಬದ ಬಳಿಕ ರೋಗಿಗಳಿಗೆ ಡಯಾಲಿಸಿಸ್ ಆರಂಭವಾಯಿತು.
ಈ ಕೇಂದ್ರ ಹಾಗೂ ಜಿಲ್ಲೆಯ ಐದು ತಾಲೂಕು ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಸೆಂಟರ್‌ಗಳ ಸಿಬ್ಬಂದಿ ಬೆಂಗಳೂರಲ್ಲಿ ನಡೆಯುತ್ತಿ ರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಇದನ್ನು ತಿಳಿದು ಹಲವು ರೋಗಿಗಳು ಗಾಬರಿಯಾಗಿದ್ದಾರೆ. ಜಿಲ್ಲಾಸ್ಪತ್ರೆ ಕೇಂದ್ರದ 10, ವಿವಿಧ ತಾಲೂಕುಗಳಲ್ಲಿನ 30 ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ತಾಲೂಕು ಸೆಂಟರ್‌ಗಳಲ್ಲಿ ಮೊದಲ ದಿನದಿಂದಲೇ ಡಯಾಲಿಸಿಸ್‌ಗೆ ತೊಂದರೆಯಾಗಿದೆ. ಆದರೆ, ಜಿಲ್ಲಾಸ್ಪತ್ರೆ ಸೆಂಟರ್‌ಗೆ, ತುಮಕೂ ರಿನಿಂದ ಇಬ್ಬರು, ನಗರದ ಖಾಸಗಿ ಆಸ್ಪತ್ರೆಯಿಂದ ಒಬ್ಬರು ಸೇರಿ ಮೂವರು ಖಾಸಗಿ ಟೆಕ್ನಿಷಿಯನ್‌ಗಳನ್ನು ನಿಯೋಜಿಸಲಾಗಿದೆ. ಇದ ರಿಂದಾಗಿ ವಿಳಂಬವಾದರೂ, ಡಯಾಲಿಸಿಸ್ ನಡೆದಿದೆ. ಜಿಲ್ಲಾಸ್ಪತ್ರೆಯ ಕೇಂದ್ರದಲ್ಲಿ 3 ಪಾಸಿಟಿವ್, 6 ನೆಗಿಟಿವ್ ಡಯಾಲಿಸಿಸ್ ಯಂತ್ರಗಳಿವೆ. ನೆಗಿಟಿವ್ ಯಂತ್ರಗಳ ಪೈಕಿ ಒಂದು ದುರಸ್ತಿಯಲ್ಲಿದೆ.
ನಾಲ್ಕು ತಾಸಿಗೆ ಒಂದು ಶಿಫ್ಟ್‌ನಂತೆ 8 ರೋಗಿಗಳಿಗೆ ಡಯಾಲಿಸಿಸ್ ನಡೆಸಲಾಗಿದೆ. ಸದ್ಯಕ್ಕೆ ಇಲ್ಲಿ ಔಷಧದ ಕೊರತೆ ಇಲ್ಲ. ಇನ್ನು ತಾಲೂಕುಗಳಲ್ಲಿರುವ ಐದು ಡಯಾಲಿಸಿಸ್ ಸೆಂಟರ್‌ಗಳಲ್ಲಿ ತಲಾ ಎರಡು ಯಂತ್ರಗಳಿವೆ.
ಮುಷ್ಕರ ಹಿನ್ನೆಲೆಯಲ್ಲಿ ತಾಲೂಕು ಸೆಂಟರ್‌ಗಳಲ್ಲಿ ಡಯಾಲಿಸಿಸ್ ನಡೆದಿಲ್ಲ. ಇದರಿಂದಾಗಿ ತಾಲೂಕು ಕೇಂದ್ರದ ಒಂದು ಸೆಂಟರ್‌ನಲ್ಲಿ ದಿನವೊಂದಕ್ಕೆ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ 5-6 ರೋಗಿಗಳು ಪರದಾಡುವಂತಾಗಿದೆ. ಜಿಲ್ಲಾಸ್ಪತ್ರೆ ಸೆಂಟರ್‌ನ ಅಂದಾಜು 70 ರೋಗಿಗಳ ಸಹಿತ 200ಕ್ಕೂ ಹೆಚ್ಚು ರೋಗಿಗಳಿಗೆ ಡಯಾಲಿಸಿಸ್ ಆಗಬೇಕಿದೆ. ಸಿಬ್ಬಂದಿ ಮುಷ್ಕರ ಮುಂದುವರಿದರೆ, ಪರಿಸ್ಥಿತಿ ಬಿಗಿಡಾಯಿಸಲಿದೆ.
ಜಿಲ್ಲಾಸ್ಪತ್ರೆ ಸೆಂಟರ್‌ಗೆ ಖಾಸಗಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಔಷಧದ ಕೊರತೆ ಇಲ್ಲವೆಂದು ಉಸ್ತುವಾರಿ ವೈದ್ಯ ಡಾ.ಪ್ರಕಾಶ್ ಹೇಳಿ ದರು. ಜಿಲ್ಲೆ ಡಯಾಲಿಸಿಸ್ ಸೆಂಟರ್‌ಗಳ ಎಲ್ಲ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.