ಮುಂದುವರಿದ ಕರೊನಾ ಆರ್ಭಟ

3-gdg-1a
Published on

ಗದಗ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ಮಂಗಳವಾರ ಇಬ್ಬರು ಕರೊನಾ ಸೇನಾನಿಗಳು (ವೈದ್ಯೆ, ನರ್ಸ್) ಸೇರಿ 9 ಜನರಿಗೆ ಸೋಂಕು ತಗುಲಿದೆ. ಭಾನುವಾರ 18, ಸೋಮವಾರ 1 ಮತ್ತು ಮಂಗಳವಾರ 9 ಸೇರಿ ಮೂರು ದಿನಗಳಲ್ಲಿ ಒಟ್ಟು 28 ಕೇಸ್​ಗಳು ಪತ್ತೆಯಾದಂತಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಪಿ-8289 ಹಾಗೂ ಪಿ-8290 ಸೋಂಕಿತರ ಸಂಪರ್ಕದಿಂದ ಗದಗ ತಾಲೂಕಿನ ಹೊಂಬಳ ಗ್ರಾಮದ 32 ಹಾಗೂ 38 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.

ಗದಗ ತಾಲೂಕಿನ ಹರ್ತಿ ಗ್ರಾಮದ ಸೋಂಕಿತ ಪಿ-7832 ಸಂಪರ್ಕದಿಂದ ಗದಗ ತಾಲೂಕಿನ ಹೊಸೂರಿನ 65 ವರ್ಷದ ಮಹಿಳೆಗೆ ಹಾಗೂ ಪಿ-8725 ಸೋಂಕಿತ ಸಂಪರ್ಕದಿಂದ ಗದಗ ನಗರದ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಲ್ಲಸಮುದ್ರದ 35 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷನಿಗೆ ಅಂತರ್ ಜಿಲ್ಲಾ ಪ್ರಯಾಣದಿಂದ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಿಂದ 28 ವರ್ಷದ ಪುರುಷ ಹಾಗೂ 32 ವರ್ಷದ ಮಹಿಳೆಗೆ ಸೋಂಕು ಹರಡಿದೆ.

ಸೋಂಕಿತರಿಗೆ ಜಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಖಾಸಗಿ ವೈದ್ಯೆಗೆ ವೈರಸ್ : ನಗರದ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ 25 ವರ್ಷದ ವೈದ್ಯೆಗೆ ಸೋಂಕು ತಗುಲಿದೆ. ಇದೇ ನರ್ಸಿಂಗ್ ಹೋಂನಲ್ಲಿ ಗದಗ ತಾಲೂಕಿನ ಕುರಡಗಿ ಗ್ರಾಮದ ಸೋಂಕಿತ ಮಹಿಳೆ ಮತ್ತು ಗದಗ ನಗರದ ಎಸ್.ಎಂ. ಕೃಷ್ಣ ನಗರದ ಸೋಂಕಿತ ವ್ಯಕ್ತಿ ಇಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ 35 ವರ್ಷದ ಪುರುಷ ಶುಶ್ರೂಷಾಧಿಕಾರಿಗೆ ಸೋಂಕು ತಗುಲಿದೆ. ಇವರು ಕಳೆದ ಏಳು ದಿನಗಳಿಂದ ಕ್ವಾರಂಟೈನ್​ನಲ್ಲಿ ಇದ್ದರು. ಹೀಗಾಗಿ ಅವರಿಗೆ ಪ್ರಥಮ ಮತ್ತು ದ್ವಿತೀಯ ಸಂರ್ಪತರಿಲ್ಲ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಒಂದೇ ಕುಟುಂಬದ ಮೂವರಿಗೆ ಸೋಂಕು

ಗಜೇಂದ್ರಗಡ: ಇಟಗಿ ಭೀಮಾಂಬಿಕೆಯ ಸುಕ್ಷೇತ್ರ ಇಟಗಿ ಗ್ರಾಮಕ್ಕೂ ಕರೊನಾ ಕಾಲಿಟ್ಟಿದ್ದು, ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢಪಟ್ಟಿದೆ. ಗ್ರಾಮದ 38 ವರ್ಷದ ಪುರುಷನಿಗೆ ಅಂತರ್ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ಬಂದಿದೆ. ಇವರ ಸಂಪರ್ಕದಿಂದ 28 ವರ್ಷದ ಪುರುಷ ಹಾಗೂ 32 ವರ್ಷದ ಮಹಿಳೆ ಕೊವಿಡ್-19 ಸೋಂಕು ದೃಢಪಟ್ಟಿದೆ.

ಪಿ-9407 ವ್ಯಕ್ತಿಯು ಮುಂಡರಗಿ ಪಟ್ಟಣದಲ್ಲಿ ಸಿಂಗಟಾಲೂರ ಏತ ನೀರಾವರಿ ಇಲಾಖೆಯ ನೌಕರರನಾಗಿದ್ದು, ಕಚೇರಿಯ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಬಂದಿದ್ದರು. ನಾಲ್ಕು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ರೋಣ ಪಟ್ಟಣದ ಭಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯರು ಆಸ್ಪತ್ರೆಗೆ ದಾಖಲಾದ ರೋಗಿ ಮತ್ತು ಆತನ ತಮ್ಮ ಹಾಗೂ ಅತ್ತಿಗೆಯ ತಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರು. ಸೋಮವಾರ ಮೂವರಿಗೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ತಂದೆಯ ತಿಥಿ ಊಟ ಹಾಕಿದ್ದರು..!: ಕರೊನಾ ಸೋಂಕಿತ ವ್ಯಕ್ತಿಯು ಇತ್ತೀಚೆಗೆ ಅವರ ತಂದೆಯ ಪುಣ್ಯತಿಥಿಯನ್ನು ಇಟಗಿ ಗ್ರಾಮದ ಸ್ವಗೃಹದಲ್ಲಿ ನೆರವೇರಿಸಿದ್ದರು. ಅಂದು ಇಟಗಿ ಮಠದ ಧರ್ಮದರ್ಶಿ ಹಾಗೂ ಕುಟುಂಬದ ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂರ್ಪದಲ್ಲಿದ್ದ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇತಿಹಾಸ ಪ್ರಸಿದ್ಧ ಇಟಗಿ ಭೀಮಾಂಬಿಕೆಯ ದೇವಸ್ಥಾನ ಮುಚ್ಚಲಾಗಿದೆ. ಗ್ರಾಮಸ್ಥರು ಮನೆಯಿಂದಾಚೆ ಬರದಂತೆ ಸುತ್ತಲೂ ಮುಳ್ಳಿನ ಬೇಲಿ, ಬ್ಯಾರಿಕೇಡ್ ಹಾಕಲಾಗಿದೆ.

ಸರ್ಕಾರಿ ಆಸ್ಪತ್ರೆ ಸೀಲ್​ಡೌನ್

ರೋಣ: ಪಟ್ಟಣದ ಪಂಡಿತ ಭೀಮಸೇನ್ ಜೋಶಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಬಾಗಲಕೋಟೆ ಮೂಲದ ವ್ಯಕ್ತಿಯಲ್ಲಿ ಸೋಮವಾರ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಮಂಗಳವಾರ ಸೀಲ್​ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಚಾಲಕರಾಗಿರುವ ಇವರು ಮೂಲತಃ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಯಂಕಂಚಿ ಗ್ರಾಮದವರು. ಇವರು ಪಟ್ಟಣದ ಕಲ್ಯಾಣನಗರದಲ್ಲಿರುವ ಪತ್ನಿಯ ತವರುಮನೆಯಲ್ಲಿ ಕಳೆದ ಒಂದು ವಾರದಿಂದ ವಾಸವಾಗಿದ್ದರು. ಸೋಮವಾರ ಚಿಕಿತ್ಸೆಗೆಂದು ಪಟ್ಟಣದ ಆಸ್ಪತ್ರೆಗೆ ಬಂದಿದ್ದರು.

ಪೊಲೀಸರಿಗೆ ಕರೊನಾ ಆತಂಕ

ಮುಂಡರಗಿ: ಪಟ್ಟಣದ ಹುಡ್ಕೊ ಕಾಲನಿಯಲ್ಲಿರುವ ಸಿಂಗಟಾಲೂರ ಏತ ನೀರಾವರಿ ಇಲಾಖೆ ಹಾಗೂ ಪಟ್ಟಣದ ಪೊಲೀಸ್ ಠಾಣೆಯ ಕೆಲವು ನೌಕರರು ಕರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರ ಗಂಟಲ ದ್ರವವನ್ನು ಮಂಗಳವಾರ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಪಟ್ಟಣದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಕೊಡಗು ಜಿಲ್ಲೆಯ ಶನಿವಾರಸಂತೆ ಪಟ್ಟಣದ ವ್ಯಕ್ತಿಯೊಬ್ಬರು ಜೂ.17ರಂದು ಪೊಲೀಸ್ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿಗೆ ಜೂ.22ರಂದು ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಪೊಲೀಸ್ ಠಾಣೆಯ 10 ಸಿಬ್ಬಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ, ಮುಂಜಾಗ್ರತೆ ಕ್ರಮವಾಗಿ ಠಾಣೆಯ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಅವಶ್ಯವಿದ್ದವರಿಗೆ ಮಾತ್ರ ಸ್ಕ್ರೀನಿಂಗ್ ಮಾಡಿ ಒಳಗೆ ಕಳುಹಿಸಲಾಗುತ್ತಿದೆ.

ಕರೊನಾ ಸೋಂಕು ದರಢಪಟ್ಟ ರೋಣ ತಾಲೂಕಿನ ಇಟಗಿ ಗ್ರಾಮದ ವ್ಯಕ್ತಿಯೊಬ್ಬರು ಮುಂಡರಗಿ ಪಟ್ಟಣದ ಸಿಂಗಟಾಲೂರ ಏತ ನೀರಾವರಿ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ನೀರಾವರಿ ಇಲಾಖೆಯಲ್ಲಿ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದಿರುವ 45 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ 20 ನೌಕರರನ್ನು ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದವರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net