ಮುಂದುವರಿದ ಕರವೇ ಪ್ರತಿಭಟನೆ

12_09_Mdy_03(Protest)
Published on

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ ಮುಂದುವರಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಶನಿವಾರ ಮತ್ತು ಭಾನುವಾರ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಪ್ರತಿಭಟನೆ ನಡೆಸಿ ಗುತ್ತಿಗೆ ಪಡೆದ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಎದುರು ಧರಣಿ ಮುಂದುವರಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರನ್ನು ಉಮ್ಮಡಹಳ್ಳಿ ಗೇಟ್ ಬಳಿಗೆ ಕರೆದುಕೊಂಡು ಹೋಗಿ ಸಮಸ್ಯೆಯ ಬಗ್ಗೆ ವಿವರಿಸಿದರು.

ಉಮ್ಮಡಹಳ್ಳಿ ಗೇಟ್ ಸಮೀಪ ಅಧ್ವಾನದ ಕಾಮಗಾರಿ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆಯನ್ನೇ ಕೊಟ್ಟಿಲ್ಲ. ಇದರಿಂದಾಗಿ ಹತ್ತಾರೂ ಹಳ್ಳಿಗಳ ಗ್ರಾಮಸ್ಥರ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಬೈಪಾಸ್ ಇಲ್ಲದಿರುವುದರಿಂದ ಜನರು ಓಡಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಅಲ್ಲದೆ ಈಗಾಗಲೇ ಹಳೆಯದಾಗಿರುವ ಮೇಲ್ಸೆತುವೆ ಕೆಳಗೆ ಕಾಮಗಾರಿ ಮಾಡಲಾಗುತ್ತಿದೆ. ಸ್ವಲ್ಪ ಸ್ವಲ್ಪವಾಗಿಯೇ ಕೊರೆಯುವ ಕೆಲಸ ನಡೆಯುತ್ತಿದೆ. ಇದೇ ರೀತಿಯಾದರೆ ಮೇಲ್ಸೆತುವೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು. ಪ್ರತಿಭಟನಾಕಾರರಿಂದ ಮಾಹಿತಿ ಪಡೆದ ಎಡಿಸಿ ಸ್ಥಳದಿಂದ ಹೊರಟರು.

ವೇದಿಕೆ ಜಿಲ್ಲಾಧ್ಯಕ್ಷೃ ಎಚ್.ಡಿ.ಜಯರಾಂ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಉಮ್ಮಡಹಳ್ಳಿ ಗೇಟ್ ಬಳಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಗುಣಮಟ್ಟದ ಕಾಮಗಾರಿಯಲ್ಲಿ ಟೋಲ್ ರಸ್ತೆ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಬೇಕು. ಬೆಂಗಳೂರು-ಮೈಸೂರು ರಸ್ತೆಯುದ್ದಕ್ಕೂ ಬರುವ ಗ್ರಾಮಗಳ ಜನರಿಗೆ ಈ ರಸ್ತೆ ಬಳಕೆಗೆ ಯಾವುದೆ ಟೋಲ್ ವಿಧಿಸಬಾರದು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯರಾದ ನಾಗಣ್ಣ, ಕೃಷ್ಣಪ್ಪ, ನಾಗಣ್ಣಗೌಡ, ಮುದ್ದೇಗೌಡ, ಮಹೇಂದ್ರ, ಆಟೋ ಪುಟ್ಟಸ್ವಾಮಿ, ಕುಮಾರ್, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net