

ಹಾಸನ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಅಂತಿಮಗೊಂಡಿದ್ದು, ಸೀಟು ಹಂಚಿಕೆ ಸಂಬಂಧ ಮುಂದಿನ ವಾರ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈಗಾಗಲೇ ರಾಜ್ಯದ ನಾಯಕರಾದ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಬೊಮ್ಮಾಯಿ ಸೇರಿದಂತೆ ಹಲವರ ಜತೆ ಮಾತುಕತೆ ನಡೆಸಿದ್ದಾರೆ. ಮಂಡ್ಯ, ಕೋಲಾರ, ತುಮಕೂರು, ಹಾಸನ ಚಿಕ್ಕಬಳ್ಳಾಪುರವನ್ನು ಜೆಡಿಎಸ್‌ಗೆ ಬಿಟ್ಟುಕೊಡುತ್ತಾರೆ ಎಂಬುದರ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಮುಂದಿನ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಸೀಟು ಹಂಚಿಕೆ ಸಂಬಂಧ ಮಾತುಕತೆ ನಡೆಸಲಿದ್ದಾರೆ. ನಾನು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು
ಮುಂಬರುವ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ಈಗಾಗಲೇ ನನಗೆ 90 ವರ್ಷವಾಗಿದೆ. ಹಾಸನದಿಂದ ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗಲಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ಧಿಸುವ ವಿಚಾರವಾಗಿ ಈಗಾಗಲೇ ಹಲವು ವಿಶ್ಲೇಷಣೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸ್ಪರ್ಧೆ ಮಾಡುವಂತೆ ತಿಳಿಸಿದರೆ ಅವರು ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಆದರೆ ಅವರಿಗೆ ಸ್ಪರ್ಧಿಸುವ ಮನಸ್ಸಿಲ್ಲ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರಿಗೆ ಇದು ಇಷ್ಟವಿಲ್ಲ. ತಂದೆ-ಮಕ್ಕಳು ಚುನಾವಣೆಗೆ ಸ್ಪರ್ಧಿಸಿದರೆ ತೊಂದರೆ ಆಗಬಹುದು. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ಪಕ್ಷದ ಸಂಘಟನೆ ದೃಷ್ಟಿಯಿಂದ ಹಾಗೂ ಲೋಕಸಭೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಸಂಬಂಧ ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ ಬೇಲೂರು, ಅರಸೀಕೆರೆ, ಹಾಸನ ಹಾಗೂ ಚನ್ನರಾಯಪಟ್ಟಣದಲ್ಲಿ ಸಭೆ ಮಾಡಿದ್ದೇನೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೈ ಮುಗಿದು ಮತದಾರರಲ್ಲಿ ಮನವಿ ಮಾಡುತ್ತೇನೆ. ಈಗ ತಾಲೂಕು ಮಟ್ಟದಲ್ಲಿ ಸಭೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮಾಂತರ ಮಟ್ಟದಲ್ಲಿ ಕೂಡ ಸಭೆ ಮಾಡಲಾಗುವುದು. ಅಲ್ಲದೆ ಮುಂದಿನ ವಾರದಿಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಮ್ಮ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರು ಇಂಡಿಯಾ ಒಕ್ಕೂಟದಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಎಎಪಿ ಹಾಗೂ ಮಹಾರಾಷ್ಟ್ರದ ಠಾಕ್ರೆ ಕುಟುಂಬದವರೂ ಕೂಡ ಅಪಸ್ವರ ಎತ್ತಿದ್ದಾರೆ. ಇಡೀ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸ್ಥಿರ ಸರ್ಕಾರ ನೀಡುವಂತಹ ಬೆಳವಣಿಗೆ ಉಂಟಾದರೆ ಸಂತೋಷಪಡುವ ವ್ಯಕ್ತಿ ನಾನು ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆತನ್ನು ಅಸ್ಸಾಂ ರಾಜ್ಯದಲ್ಲಿ ತಡೆದಿರುವ ಬಗ್ಗೆ ನಾನಾ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ. ಬಾಂಗ್ಲಾದಿಂದ ನುಸುಳುಕೋರರು ನಮ್ಮ ದೇಶಕ್ಕೆ ಬಂದು ಆಕ್ರಮಣ ಮಾಡಿದ್ದಾರೆ. ಅಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮನಮೋಹನ್ ಸಿಂಗ್ ಅವರು 35 ವರ್ಷಗಳ ಕಾಲ ಈ ರಾಜ್ಯದಿಂದ ಪ್ರತಿನಿಧಿಸಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಈ ಸಮಸ್ಯೆಯನ್ನು ಏಕೆ ಬಗೆಹರಿಸಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ರಾಹುಲ್ ಗಾಂಧಿಯವರು ಅಲ್ಲಿಗೆ ಹೋಗುವಂತಹ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಅಯೋಧ್ಯ ರಾಮಮಂದಿರ ವಿಚಾರವಾಗಿ ಕಾಂಗ್ರೆಸ್‌ನವರು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಗಾಂಧೀಜಿ ಮತ್ತು ರಾಮ ಇಬ್ಬರನ್ನೂ ಪೂಜಿಸುತ್ತೇನೆ ಎನ್ನುತ್ತಾರೆ. ಇನ್ನು ಹಲವು ಮುಖಂಡರು ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ರಾಮ ಇದ್ದಾನೆ ಎಂದು ಹೇಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಇರುವುದು ಒಂದೇ ರಾಮ. ಅದು ದಶರಥ ಮತ್ತು ಕೌಸಲ್ಯ ಮಗ. ಇದರ ಬಗ್ಗೆ ಈಗ ಚರ್ಚೆ ಬೇಡ ಎಂದರು.
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆದ ಸಂದರ್ಭದಲ್ಲಿ ನಾನು ದಲಿತ ನಾಯಕರಾದ ಖರ್ಗೆ ಮತ್ತು ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ ನಾಯಕರು ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿದರು. ಆದರೆ ಅವರು ಜೆಡಿಎಸ್ ಸಹವಾಸದಿಂದ ನಮಗೆ 78 ಸೀಟು ಬಂದವು ಎಂದು ಹೇಳುತ್ತಾರೆ ಎಂದರು.
ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ನಮಗೆ ಅವರ ಕಾರ್ಯಗಳು ಸಂತೋಷ ತಂದಿದೆ. ಲೋಕಸಭೆಯಲ್ಲಿ ಕಾವೇರಿ ವಿಚಾರ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾನು ಕೂಡ ಚರ್ಚೆ ಮಾಡಿದ್ದೇನೆ. ನಮ್ಮ ಪಕ್ಷದಿಂದ ಕೇವಲ ಇಬ್ಬರು ಇರುವುದರಿಂದ ಮಾತನಾಡಲು ಮತ್ತು ಚರ್ಚೆ ನಡೆಸಲು ಕೇವಲ ಎರಡು ನಿಮಿಷ ಕಾಲಾವಕಾಶ ನೀಡುತ್ತಾರೆ. ನಾನು ಎದ್ದು ಕುಳಿತುಕೊಳ್ಳಲು ಎರಡು ನಿಮಿಷ ಬೇಕು. ಇಂತಹ ಸಂದರ್ಭದಲ್ಲಿ ಹೇಗೆ ಚರ್ಚೆ ಮಾಡುವುದು ಎಂದು ಪ್ರಶ್ನಿಸಿದರು.