ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ : ಎಚ್.ಡಿ. ಕುಮಾರಸ್ವಾಮಿ ಮಾಹಿತಿ

1
Published on

ಬಿಡದಿ: ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಬೆಂಗಳೂರಿನಲ್ಲಿ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಮಹತ್ವದ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ, ಶಾಸಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಬಿಡದಿಯ ಕೇತಿಗಾನಹಳ್ಳಿ ತೋಟದಲ್ಲಿ ಗುರುವಾರ ತಮ್ಮನ್ನು ಭೇಟಿಯಾಗಿದ್ದ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯವು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಅನೇಕ ಕಠಿಣ ಸವಾಲುಗಳು ಎದುರಾಗಿವೆ. ಅವನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ಎಲ್ಲ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಸಭೆ ಕರೆಯಲಾಗುತ್ತಿದೆ. ಕನ್ನಡಪರ ಸಂಘಟನೆಗಳ ಜತೆಗೆ ರೈತರು, ನೀರಾವರಿ ವಿಷಯಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಅನೇಕ ಸಂಘಟನೆಗಳಿವೆ. ಅವೆಲ್ಲವನ್ನೂ ಒಗ್ಗೂಡಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಸಭೆ: ಮುಂದಿನ ವಾರ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳ ಜತೆ ಮುಕ್ತವಾಗಿ ಚರ್ಚಿಸಲಾಗುವುದು. ಕನ್ನಡಿಗರ ನಿರುದ್ಯೋಗ ಸಮಸ್ಯೆ, ಖಾಸಗಿ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆದು, ಮುಂದಿನ ದಿನಗಳಲ್ಲಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಪ್ರಾದೇಶಿಕ ಪಕ್ಷದ ಸರ್ಕಾರ ತರುವ ದಿಸೆಯಲ್ಲಿ ರೂಪುರೇಷೆ ರೂಪಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಾವೇ ಹೋರಾಡಬೇಕಿದೆ: ರಾಜ್ಯದ ಸಮಸ್ಯೆಗಳ ಬಗ್ಗೆ ನಾವೇ ಹೋರಾಡಿ, ಪರಿಹರಿಸಿಕೊಳ್ಳಬೇಕಿದೆ. ಈ ಗುರಿಸಾಧನೆಗಾಗಿ ಪ್ರಾದೇಶಿಕ ರಾಜಕೀಯ ಶಕ್ತಿಯ ಅಗತ್ಯವಿದೆ. ಆ ದಿಕ್ಕಿನಲ್ಲಿ ಜೆಡಿಎಸ್‌ನಿಂದ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಮಾಜಿ ಸಿಎಂ ವಿವರಿಸಿದರು.

ರಾಷ್ಟ್ರೀಯ ಪಕ್ಷಗಳು ತಿರಸ್ಕೃತ: ದೇಶದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಜನರು ತಿರಸ್ಕರಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚೆಚ್ಚು ಮಣೆ ಹಾಕುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 75 ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನೀರಾವರಿ ಸೇರಿ ವಿವಿಧ ವಲಯಗಳಲ್ಲಿ ಭಾರಿ ಅನ್ಯಾಯ ಮಾಡಿವೆ. ಆದರೆ, ಅಧಿಕಾರದಲ್ಲಿದ್ದ ಅಲ್ಪಸ್ವಲ್ಪ ಅವಧಿಯಲ್ಲೇ ಜೆಡಿಎಸ್ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಈ ಬಗ್ಗೆ ಸರ್ಕಾರದ ಬಳಿ ನೈಜ ದಾಖಲೆಗಳು ಇವೆ. ಹಾಗೆಯೇ ಕನ್ನಡ ಭಾಷೆಗೆ ಕೇಂದ್ರ ಸರ್ಕಾರದಿಂದ ನಾನಾ ಬಗೆಯ ಕಿರುಕುಳ ಎದುರಿಸುತ್ತಿದೆ. ಇದನ್ನು ತಪ್ಪಿಸಬೇಕಿದೆ ಎಂದು ಜೆಡಿಎಸ್ ಮುಖಂಡ ಹೇಳಿದರು.

ನವ ಕರ್ನಾಟಕ ಯುವಶಕ್ತಿ ಅಧ್ಯಕ್ಷ ಕೆ.ಎನ್. ಲಿಂಗೇಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗಿರೀಶ್‌ಗೌಡ, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಸಿ. ಮೂರ್ತಿ, ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಟಿ. ರಮೇಶ್‌ಗೌಡ, ಮುಖಂಡರಾದ ಲೋಕೇಶ್ ಗೌಡ, ಚೇತನ್ ಗೌಡ, ಸೂಚಿ ನೀಲೇಶ್ ಗೌಡ, ಶಂಕರೇ ಗೌಡ, ಜಯರಾಜ್‌ನಾಯ್ಕ, ವಿಶ್ವನಾಥ, ಗಿರೀಶ್ ಶಿವಾಚಾರ್ಯ, ವೆಂಕಟೇಶ್‌ಗೌಡ ಮತ್ತಿತರರು ಇದ್ದರು.

ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡುವುದು, ಮಂತ್ರಿಗಳ ವಿರುದ್ಧ ಹೇಳಿಕೆಗಳನ್ನು ನೀಡುವುದು ಉತ್ತಮ ನಡವಳಿಕೆ ಅಲ್ಲ. ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಆದು ಬಿಟ್ಟು ಶಿಸ್ತಿನ ಪಕ್ಷ ಎಂದು ಧ್ಯೇಯವಾಕ್ಯ ಹಾಕಿಕೊಂಡ ಪಕ್ಷದ ಶಾಸಕರು ದಿನನಿತ್ಯ ಸರ್ಕಾರ ಮತ್ತು ಮಂತ್ರಿಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ. ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net