ಮುಂದಿನ ವರ್ಷ ವಿಮಾನ ಹಾರಾಟ ಖಚಿತ

The flight is sure to fly next year
ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆಎಸ್‌ಐಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ರವಿ, ಜಿಲ್ಲಾಧಿಕಾರಿ ಟಿ. ಭೂಬಾಲನ್ ಇತರರಿದ್ದರು.
Published on

ವಿಜಯಪುರ: ಸ್ಥಳೀಯ ವಿಮಾನ ನಿಲ್ದಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಮುಂದಿನ ವರ್ಷ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.

ತಾಲೂಕಿನ ಬುರಣಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯ ಎಟಿಆರ್, ರನ್‌ವೇ, ಪಾರ್ಕಿಂಗ್, ಇತರೆ ಕಚೇರಿ ಸಮುಚ್ಚಯವನ್ನು ಶುಕ್ರವಾರ ವೀಕ್ಷಿಸಿ ಅವರು ಮಾತನಾಡಿದರು.

ಸದ್ಯ 247.92 ಕೋಟಿ ರೂ.ಗಳು ವಿಮಾನ ನಿಲ್ದಾಣ ಕಾಮಗಾರಿ ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿಯಾಗಿ 80ರಿಂದ 50 ಕೋಟಿ ರೂ. ಬೇಕಾಗಿದ್ದು, ಸದ್ಯ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಒಟ್ಟು 400 ಕೋಟಿ ರೂ. ಅನುದಾನ ಕಾಮಗಾರಿ ಪೂರ್ಣಗೊಳ್ಳಲು ಬೇಕಿದೆ. ಮುಂದಿನ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು. ಸಹ ಏಪ್ರಿಲ್‌ನಲ್ಲಿ ವಿಮಾನ ಹಾರಾಟದ ಗುರಿ ಹೊಂದಲಾಗಿದೆ. ಈಗಾಗಲೇ ರನ್‌ವೇ, ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸೇರಿದಂತೆ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಹಗಲಿನಲ್ಲಿ ಮಾತ್ರವಲ್ಲದೇ, ರಾತ್ರಿ ಸಹ ಲ್ಯಾಂಡಿಂಗ್ ಮಾಡುವ ವ್ಯವಸ್ಥೆ ಸಹ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ವಿಚಾರದಲ್ಲಿ ಏನಾದರೂ ಮಾರ್ಪಾಡು ಮಾಡಲು ಹೆಚ್ಚುವರಿ ಕಾಮಗಾರಿ ಮಾಡುವ ಕುರಿತು ಮಾಹಿತಿ ಪಡೆದಿದ್ದೇನೆ ಎಂದರು.

ಅಗ್ನಿಶಾಮಕ ಠಾಣೆ, ವಿವಿಧ ಉಪಕರಣಗಳ ಅವಶ್ಯಕತೆ ಇದೆ. ಅದರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಮಾರ್ಗ್ ಎಂಬ ಕಂಪನಿ ನಿರ್ಮಾಣ ಕಾಮಗಾರಿ ಪಡೆದು ಹಿಂದೆ ಸರಿದಿತ್ತು. ನಂತರ ಏರ್‌ಪೋರ್ಟ್ ಅಥಾರಟಿ ಆಫ್ ಇಂಡಿಯಾ ಕಾಮಗಾರಿಗೆ ಒಲವು ತೋರಿಸಿತ್ತು. ಅದು ಸಹ ಹಿಂದೆ ಸರಿದ ಮೇಲೆ ಈಗ ಲೋಕೋಪಯೋಗಿ ಇಲಾಖೆ ವಹಿಸಿ ಅವರ ಮೂಲಕ ವಿವಿಧ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕೆಲವು ಆರೋಪಗಳು ಇವರ ಮೇಲೆ ಕೇಳಿ ಬಂದಿದೆ. ಅದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದರು.

ಈ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಈ ವಿಚಾರದಲ್ಲಿ ಯಾವುದೇ ಆರೋಪ ಮಾಡುವುದಿಲ್ಲ. ಸದ್ಯ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿ ಭೂಮಿ ಬೇಕಾದರೂ ಸಹ ಅದನ್ನು ಖರೀದಿಸಿ ಕಾಮಗಾರಿ ಮುಗಿಸಲಾಗುವುದು. ಬೆಂಗಳೂರು, ರಾಜಸ್ಥಾನ ಲೀಲಾ ಪ್ಯಾಲೇಸ್ ಮಾದರಿ ಪೇಂಟ್ ವಿಮಾನ ನಿಲ್ದಾಣಕ್ಕೆ ಬಳಸಲು ಸೂಚನೆ ನೀಡಿದ್ದೇನೆ ಎಂದರು.

ಸರ್ಕಾರ ನಿರ್ವಹಣೆಗೆ ಚಿಂತನೆ: ಇದೇ ವೇಳೆ ವಿಮಾನ ನಿಲ್ದಾಣವನ್ನು ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡುವ ಬದಲು ಸರ್ಕಾರವೇ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆದಿದೆ. ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡಿದರೆ, ಸರ್ಕಾರಕ್ಕೆ ಯಾವುದೇ ಲಾಭ ಬರುವುದಿಲ್ಲ. ವಿಮಾನ ನಿಲ್ದಾಣ ನಿರ್ವಹಣೆಗೆ ಸರ್ಕಾರವೇ ಹಣ ನೀಡಬೇಕಾಗುತ್ತದೆ. ಅದರ ಬದಲಿಗೆ ಸರ್ಕಾರವೇ ನಿರ್ವಹಣೆ ಮಾಡಿದರೆ ಉತ್ತಮ ಎನ್ನುವ ಚಿಂತನೆ ನಡೆದಿದೆ ಎಂದರು.

ಶಾಸಕ ವಿಠ್ಠಲ ಕಟಕಧೋಂಡ, ಕೆಎಸ್‌ಐಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ರವಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಡಿ. ಆನಂದಕುಮಾರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net