ಮುಂದಿನ ಮುಂಗಾರು ಅಂತ್ಯಕ್ಕೆ ಎತ್ತಿನಹೊಳೆ ನೀರು ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

IMG-20211212-WA0077
Published on

ಚಿಕ್ಕನಾಯಕನಹಳ್ಳಿ ; 2022ರ ಮುಂಗಾರು ಅಂತ್ಯಕ್ಕೆ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

250 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ 72 ಹಳ್ಳಿಗಳಲ್ಲಿರುವ 131 ಕೆರೆಗಳಿಗೆ ನೀರು ಹರಿಸುವ ಮಹತ್ವಕಾಂಕ್ಷೆ ಯೋಜನೆಗೆ ಭಾನುವಾರ ಜೆ.ಸಿ.ಪುರದಲ್ಲಿ ಚಾಲನೆ ನೀಡಿ ಮಾತನಾಡಿದರು. ಎತ್ತಿನಹೊಳೆ ಯೋಜನೆಯನ್ನು 2023ಕ್ಕೆ ಪೂರ್ಣಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಾಗದಿದ್ದರೂ ಇನ್ನಾರು ತಿಂಗಳಲ್ಲಿ ಎತ್ತಿನಹೊಳೆಯಿಂದ ನೀರನ್ನು ಪಂಪು ಮಾಡಿ ಹಾಸನದಲ್ಲಿರುವ ವಿತರಣಾ ತೊಟ್ಟಿಗೆ ಹರಿಸುತ್ತೇವೆ. ನಂತರ ಕಾಲುವೆಗಳ ಮೂಲಕ ಅರಸೀಕೆರೆ ಮತ್ತು ಕಾಮಗಾರಿ ಮುಗಿದಿರುವ ತುಮಕೂರಿನ ಭಾಗಗಳಿಗೆ ನೀರು ಹರಿಸಲಾಗುವುದು. ಚಿಕ್ಕಬಳ್ಳಾಪುರ ಮತ್ತು ಕೊರಟಗೆರೆಯ ನೀರಿನ ಸಂಗ್ರಹಗಾರಗಳ ಬಗ್ಗೆ ಇರುವ ಗೊಂದಲ ಬಗೆಹರಿಸಿ ಉಳಿಕೆ ಇರುವ ಭೂಸ್ವಾಧೀನ ಪ್ರಕ್ರಿಯೆ ಮುಗಿಸಲಾಗುವುದು ಎಂದರು.

ಕೆರೆಯ ಅರ್ಧದಷ್ಟು ಪ್ರಮಾಣದ ನೀರನ್ನು ಪೈಪ್‌ಲೈನ್ ಮುಖಾಂತರ ಗುಬ್ಬಿ ತಾಲೂಕಿನ 5 ಕೆರೆಗಳು ಸೇರಿ ಒಟ್ಟು 131 ಕೆರೆಗಳಿಗೆ ನೀರು ಹರಿಸಲಾಗುವುದು. ಭದ್ರಾ ಮತ್ತು ಹೇಮಾವತಿ ಯೋಜನೆಗಳಿಂದ ಹೊರತಾದ ಕೆರೆಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಜೆ.ಸಿ.ಪುರ, ನಾಗತಿಕೆರೆ, ಮತಿಘಟ್ಟ ಕೆರೆ, ಹಾಗೂ ಸಿಂಗದಹಳ್ಳಿ ಕೆರೆಗಳಿಗೆ ನಾಲೆಗಳ ಮೂಲಕ ನೀರು ಹರಿಸಿ ಅಲ್ಲಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುವುದು. ಚಿಕ್ಕನಾಯಕನಹಳ್ಳಿ ಕೆರೆಗೂ ನಾಲೆಯ ಮೂಲಕ ನೀರು ಹರಿಯಲಿದೆ ಎಂದು ವಿವರಿಸಿದರು.

ಹೇಮಾವತಿ ನಾಲೆಯ ಹಾಲ್ಕುರಿಕೆ, ಕುಪ್ಪೂರು ಕೆರೆಗಳ ನೀರು ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನವಾಗಲಿದ್ದು, ಮುಂದಿನ ದಿನಗಳಲ್ಲಿ ಶೆಟ್ಟಿಕೆರೆಗೆ ಈಗ ದೊರೆಯುತ್ತಿರುವ ಪ್ರಮಾಣದ ನೀರು ಸಿಗುವುದಿಲ್ಲ. ಏಕೆಂದರೆ ಆ ಭಾಗಕ್ಕೆ ಹೆಚ್ಚಿನ ನೀರು ಹರಿಸಬೇಕಿದೆ. ತಿಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ಸುರಂಗದ ಮೂಲಕ ಬುಕ್ಕಾಪಟ್ಟಣಕ್ಕೆ ಭದ್ರೆಯ ನೀರು ಹರಿಯಲಿದೆ. ತಿಪಟೂರು ತಾಲೂಕಿನಲ್ಲಿ 180 ಕೋಟಿ ರೂ.ವೆಚ್ಚದ ಸಣ್ಣ ನೀರಾವರಿ ಇಲಾಖೆಯಿಂದ ಕಾರ್ಯಕ್ರಮ ಮಾಡುವೆವು ಎಂದರು. ಮುಖಂಡ ಕೇಶವಮೂರ್ತಿ, ಕೆಂಕೆರೆ ನವೀನ್, ರಂಗಸ್ವಾಮಯ್ಯ, ಹುಳಿಯಾರು ಪಪಂ ಅಧ್ಯಕ್ಷ ಕಿರಣ್ ಕುಮಾರ್, ಗ್ರಾಪಂ ಪ್ರತಿನಿಧಿಗಳು ಹಾಗೂ ಪುರಸಭಾ ಸದಸ್ಯರು ಇದ್ದರು.

ಭಾವುಕರಾದ ಸಚಿವ ಮಾಧುಸ್ವಾಮಿ ! ; ನೇರ, ನಿಷ್ಠುರ, ಒರಟು ಸ್ವಭಾವದ ಸಚಿವ ಮಾಧುಸ್ವಾಮಿ ಅವರ ಕಣ್ಣಾಲಿಗಳು ತುಂಬಿ ಬಂದವು. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಧನ್ಯತಾಭಾವದಿಂದ ಗದ್ಗದಿತರಾದ ಸಚಿವರನ್ನು ಕಂಡು ಕ್ಷೇತ್ರದ ಜನತೆ ಮೂಕವಿಸ್ಮಿತರಾದರು.

ಸ್ವಗ್ರಾಮ ಜೆ.ಸಿ.ಪುರದಲ್ಲಿ 131 ಕೆರೆಗಳಿಗೆ ನೀರು ಹರಿಸುವ 250 ಕೋಟಿ ರೂ., ಕಾಮಗಾರಿಗೆ ಚಾಲನೆ ಕೊಟ್ಟು ಮಾತನಾಡುತ್ತಾ, ಮೊನ್ನೆ ದಿನ ಹುಳಿಯಾರಿನಲ್ಲಿ ವೃದ್ಧೆಯೊಬ್ಬರು ಸಿಕ್ಕಿ ಏನಪ್ಪಾ ನಿನ್ನ ಬಾಯಹರಕೆ, ಅದ್ಯಾವ್ ಬಾಯಲ್ಲಿ ಅಂದಿದ್ಯೋ ಎಲ್ಲ ಕೆರೆ ತುಂಬಿಸ್ತಿನಿ ಅಂತಾ, ಮಳೆನೇ ಬಂದು ಎಲ್ಲ ಕೆರೆನೇ ತುಂಬಿ ಹೋಯ್ತು ಅಂದ್ರು. ಆ ಮಹಾತಾಯಿ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು. ನಾನು ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ನೆರವೇರಿಸಿ ನಾಲಿಗೆ ಉಳಿಸಿಕೊಳ್ಳಬೇಕೆಂದರೆ ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಬೇಕು ತಾಯಿ ಎಂದಿದ್ದೆ. ಆ ಕನಸು ಈಗ ನೆರವೇರುತ್ತಿದೆ ಎಂದು ಭಾವುಕರಾದರು. ಕೆರೆ ತುಂಬಿದೆ ಅಂತ ದಿನಕ್ಕೊಬ್ಬರು ಗಂಗೆ ಪೂಜೆ ಮಾಡಿ ಬಾಗಿನಿ ಅರ್ಪಿಸಿದ್ದೇ ಅರ್ಪಿಸಿದ್ದು. ನಾನು ಯಾರನ್ನೂ ಟೀಕಿಸಲು ಹೋಗುವುದಿಲ್ಲ. ಟೆಂಡರ್ ಆಗಿ 12 ವರ್ಷಗಳಾದರೂ ಏಕೆ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ಈಗ ಹಣ ಬಿಡುಗಡೆ ಮಾಡಿದ್ದು ಕೆರೆಗಳಿಗೆ ನೀರು ತುಂಬಿಸುವ ಕಾಲಕೂಡಿ ಬಂದಿದೆ ಎಂದು ರಾಜಕೀಯ ವಿರೋಧಿಗಳಿಗೆ ತೀಕ್ಷ ್ಣವಾಗಿ ಉತ್ತರಕೊಟ್ಟರು.

ಜೆ.ಸಿ.ಪುರಕ್ಕೆ 2 ಯೋಜನೆ ನೀರು ; ಎತ್ತಿನಹೊಳೆ ಮತ್ತು ಹೇಮಾವತಿ ಯೋಜನೆಗಳಿಂದ ಜೆ.ಸಿ.ಪುರದ ಕೆರೆಗೆ ನೀರು ಹರಿಯಲಿದ್ದು ಸಚಿವರ ಸ್ವಗ್ರಾಮ ನೀರಿನಿಂದ ಸುಭಿಕ್ಷವಾಗಲಿದೆ. ಇಲ್ಲಿಂದಲೇ 72 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆ ಜಾರಿಯಲ್ಲಿದ್ದು ಜೆ.ಸಿ.ಪುರ ಕೆರೆಯು ತಾಲೂಕಿನ ಪ್ರಮುಖ ಜಲ ಸಂಗ್ರಹಗಾರ ಸ್ಥಳವಾಗಲಿದೆ.

ಬೋರನಕಣಿವೆಗೆ 1 ಟಿಎಂಸಿ ನೀರು ; ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ತಿಪಟೂರು ತಾಲೂಕುಗಳಿಗೆ 1.57 ಟಿ.ಎಂ.ಸಿ ನೀರು ಎತ್ತಿನಹೊಳೆ ಯೋಜನೆಯಿಂದ ಹಂಚಿಕೆ ಆಗಿದ್ದು, ಅದರಲ್ಲಿ 0.9 ಟಿಎಂಸಿ ನೀರು ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹಂಚಿಕೆ ಆಗಿದೆ. ಭದ್ರಾ ಮೇಲ್ದೃಂಡೆಯಿಂದ ಬೋರನಕಣಿವೆಗೆ ಒಂದು ಟಿಎಂಸಿ ನೀರು ಕೊಟ್ಟಿದ್ದು ಬೋರನಕಣಿವೆ ಸುತ್ತಮುತ್ತಲಿನ ಗ್ರಾಪಂಗಳಿಗೆ ನೀರು ಕೊಡುವ ಉದ್ದೇಶವಿದೆ. ಇನ್ನು ಭದ್ರಾಮೇಲ್ಡೃಂಡೆ ಯೋಜನೆಯ ನೀರು ಶಿರಾ ತಾಲೂಕಿನ 64 ಕೆರೆಗಳಿಗೆ ಹಂಚಿಕೆ ಆಗಿದ್ದು, ಅದರಲ್ಲಿ ಮದಲೂರು ಕೆರೆ ಸೇರಿಕೊಂಡಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಜೆ.ಸಿ.ಪುರ ಕೆರೆಯಿಂದ 72 ಕೆರೆಗೆ ನೀರು ಹರಿಸಲಾಗುವುದು. ಕೆರೆಗಳು ಇಲ್ಲದ ಜಾಗದಲ್ಲಿ ದೊಡ್ಡ ದೊಡ್ಡ ಅಣೆಗಳನ್ನು ನಿರ್ಮಿಸಿ ಒಂದು ಕಿ.ಮೀ.ವರೆಗೂ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚಿಸಲಾಗುವುದು. 2023ರೊಳಗೆ ಜಲ ಜೀವನ್ ಮಿಷನ್ ಅನುಷ್ಠಾನ ಮಾಡಬೇಕಿದೆ ಇದಕ್ಕಾಗಿ ಈ ಯೋಜನೆಗಳು ಪೂರಕವಾಗಿ ಕೆಲಸ ಮಾಡಲಿದ್ದು ಮೋದಿಯವರಿಗೆ ಸಹಕಾರ ನೀಡಬೇಕಿದೆ. ಜೆ.ಸಿ.ಮಾಧುಸ್ವಾಮಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net