ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ, ದೊಡ್ಡಬಳ್ಳಾಪುರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ದಿನಸಿಕಿಟ್ ವಿತರಣೆ

18dbp1
Published on

ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಅವರದ್ದು ಬರೀ ಮಾತು. ಜನರ ನೆರವಿಗೆ ಬರುವುದಿಲ್ಲ. ಹೀಗಾಗಿ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಮತ್ತು ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಭಾನುವಾರ ಆಟೋ, ಟ್ಯಾಕ್ಸಿ, ಟೆಂಪೋ ಚಾಲಕರಿಗೆ ದಿನಸಿಕಿಟ್ ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡಿದರೆ ಯಡಿಯೂರಪ್ಪ ಅವರ ಮನೆ ಆಸ್ತಿ ಏನು ಕಡಿಮೆ ಆಗುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡಲಾಗುವುದು. ಯಾರೂ ಹಸಿವಿನಿಂದ ಇರಬಾರದು. ಎಲ್ಲರನ್ನೂ ಹಸಿವಿನಿಂದ ಮುಕ್ತ ಮಾಡುವುದು ಇದರ ಉದ್ದೇಶ ಎಂದರು.

10 ಸಾವಿರ ಧನಸಹಾಯಕ್ಕೆ ಸೂಚಿಸಿದ್ದೆ: ಕೋವಿಡ್ ಸಂಕಷ್ಟದ ಸಮಯದಲ್ಲಿ ಬಿಪಿಎಲ್ ಕುಟುಂಬಗಳಿಗೆ ತಲಾ 10 ಸಾವಿರ ರೂ. ಧನಸಹಾಯ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದೆ. ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಇಂಚಿನ ಲೆಕ್ಕದಲ್ಲಿ ಎದೆ ಇದ್ದರೆ ಸಾಲದು. ಆ ಎದೆಯಲ್ಲಿ ತಾಯಿ ಹೃದಯವೂ ಇರಬೇಕು. ಅದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ಇಲ್ಲವಾಗಿದೆ ಎಂದು ಸಿದ್ದರಾಮಯ್ಯ ಬೇಸರಿಸಿದರು.

ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಿರಿ: ಕೋವಿಡ್ ಸೋಂಕಿನ 3ನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ, ಎಲ್ಲರೂ ಎರಡು ಡೋಸ್ ಕರೊನಾ ಲಸಿಕೆ ಪಡೆದುಕೊಂಡು, ಸುರಕ್ಷಿತವಾಗಿರಬೇಕು. ಆದರೆ ಕೇಂದ್ರ ಸರ್ಕಾರದ ಅಸಮರ್ಥತೆಯಿಂದ ಲಸಿಕೆಯೇ ಸಿಗದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಟೀಕಿಸಿದರು.

ಕಾಂಗ್ರೆಸ್ ಬಂದರೆ ಮಾತ್ರ ಬದುಕು ಹಸನು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನಸಾಮಾನ್ಯ ಬದುಕು ಹಸನಾಗಲು ಸಾಧ್ಯ. ಆದ್ದರಿಂದ,

ದೀನ ದಲಿತರ ಪಕ್ಷವಾದ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು. ಆ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಹಾಗೂ ಸಂಸದರು ಸದಾ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಇದಕ್ಕೂ ಮುನ್ನ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಮತ್ತು ವೆಂಕಟರಮಣಯ್ಯ 800ರಿಂದ 900 ಚಾಲಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು. ಕುರಿ ಕೊಟ್ಟು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಆ ಕುರಿಯನ್ನು ಸಿದ್ದರಾಮಯ್ಯ ಕಾರ್ಯಕರ್ತರೊಬ್ಬರಿಗೆ ನೀಡಿದರು. ವಿವಿಧ ಪಕ್ಷಗಳ ಪ್ರಮುಖ ಮುಖಂಡರು ಕಾಂಗ್ರೆಸ್ ಸೇರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಯ್ಯ, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಎಂಎಲ್‌ಸಿ ರವಿ, ಮಾಜಿ ಶಾಸಕ ಅಶೋಕ್ ಪಠಾಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಸದಸ್ಯರಾದ ಜಿ. ಲಕ್ಷ್ಮೀಪತಿ, ಎಸ್.ಆರ್. ಮುನಿರಾಜು, ಕೆಎಂಎಫ್ ಮತ್ತು ಬಮುಲ್ ನಿರ್ದೇಶಕ ಬಿ.ಸಿ. ಆನಂದ್, ಜಿಪಂ ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್‌ರೆಡ್ಡಿ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಬೈರೇಗೌಡ ಮತ್ತಿತರರಿದ್ದರು.

ಕೋವಿಡ್ ಸಂಕಷ್ಟದಲ್ಲಿ ನೆರವಿಗೆ ಬರಬೇಕಿದ್ದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ. ಶಾಸಕ ಟಿ. ವೆಂಕಟರಮಣಯ್ಯ ಒಂದು ತಿಂಗಳ ನಿರಂತರ ಅನ್ನದಾನ ಸೇರಿ ಎಲ್ಲ ವರ್ಗದ ಜನರಿಗೆ ದಿನಸಿಕಿಟ್‌ಗಳನ್ನು ವಿತರಿಸಿದ್ದು, ಶ್ಲಾಘನೀಯ. ಡಾ.ಎಂ.ವೀರಪ್ಪಮೊಯ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಮ್ಮ ತಾಲೂಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ತಾಲೂಕನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ತುಂಬಬೇಕು. ಟಿ. ವೆಂಕಟರಮಣಯ್ಯ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net