ಮುಂದಿನ ಪೀಳಿಗೆಗೆ ಭಜನೆ ಪರಂಪರೆ ತಲುಪಿಸಿ

14sgr1 (2)
ಸಾಗರದ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ ಅಖಂಡ ಭಜನಾ ಸ್ಪರ್ಧೆಯ ಸಮಾರೋಪದಲ್ಲಿ ಸಾಧಕರು ಹಾಗೂ ತೀರ್ಪುಗಾರರನ್ನು ಸನ್ಮಾನಿಸಲಾಯಿತು. ರವೀಂದ್ರ, ದಿನೇಶಕುಮಾರ್ ಜೋಶಿ , ವೈ.ಎ.ದಂತಿ, ಟಿ.ಡಿ.ಮೇಘರಾಜ್, ಆರ್.ವಿ.ಹೆಗಡೆ, ಚಂದ್ರಶೇಖರ ಇತರರಿದ್ದರು.
Published on

ಸಾಗರ: ಭಕ್ತಿ ಭಾವದ ಪ್ರತೀಕವಾದ ಭಜನೆ, ಹಾಡು, ಸಂಗೀತ ಪ್ರಕಾರಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕೃತಿ, ಸಂಸ್ಕಾರದ ಮಹತ್ವ ಪರಿಚಯಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಸಾಗರದ ಶೃಂಗೇರಿ ಶಂಕರ ಮಠದ ಸಭಾಂಗಣದಲ್ಲಿ ಶೃಂಗೇರಿ ಶಂಕರ ಮಠ, ಹವ್ಯಕ ಆತ್ಮಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ದಿನೇಶ್ ಜೋಷಿ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಅಖಂಡ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳು, ಆಧುನಿಕ ತಂತ್ರಜ್ಞಾನದಿಂದ ನಮ್ಮ ಪಾರಂಪರಿಕ ಸಾಹಿತ್ಯ, ಸಂಸ್ಕೃತಿ, ಭಜನೆಯ ಪ್ರಕಾರಗಳು ಜನರಿಂದ ದೂರವಾಗುತ್ತಿವೆ. ಇದನ್ನು ನಮ್ಮ ಮಕ್ಕಳು, ಮೊಮ್ಮಕ್ಕಳವರೆಗೆ ಮುಂದುವರಿಸಬೇಕು. ಭಜನೆ ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಇದಕ್ಕೆ ರಾಗ, ತಾಳ ಬೇಕಿಲ್ಲ. ಇಂತಹ ಸ್ಪರ್ಧೆಯಿಂದ ಭಜನಾ ಕ್ಷೇತ್ರ ವಿಸ್ತಾರ ಆಗುತ್ತಲ್ಲದೆ, ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಂಘಟಿತ ಭಾವನೆ ಬೆಳೆಸುತ್ತದೆ ಎಂದರು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅಡಕೆ ವರ್ತಕ ಮಧುಕರ ಹೆಗಡೆ, ಭಜನೆಯನ್ನು ಮಕ್ಕಳು, ವೃದ್ಧರು, ಬಡವರು, ಶ್ರೀಮಂತರು ಯಾರು ಬೇಕಾದರೂ ಹೇಳಬಹುದು. ಭಕ್ತಿ ಭಜನೆ ರೂಪದಲ್ಲಿ ವ್ಯಕ್ತವಾಗುತ್ತದೆ. ಪುರಂದರದಾಸರು, ಕನಕದಾಸರು ಭಜನೆ ಮೂಲಕ ದೇವರನ್ನು ಕಂಡುಕೊಂಡವರು ಎಂದು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಲಲಿತಾ ನಾರಾಯಣಮೂರ್ತಿ, ಗಣೇಶ್ ಬೆಳಲಮಕ್ಕಿ, ಆರ್.ವಿ.ಹೆಗಡೆ, ಚಂದ್ರಶೇಖರ ನೀಚಡಿ, ಪ್ರಭಾ ವೆಂಕಟೇಶ್, ಕಸ್ತೂರಿ ಕೃಷ್ಣಮೂರ್ತಿ, ಜ್ಯೋತಿ ಮಣೂರು ಅವರಿಗೆ ಭಜನಾ ಪೋಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ಮಹೇಶ್, ಶಿಕ್ಷಣ ತಜ್ಞ ನಾರಾಯಣಮೂರ್ತಿ ಕಾನುಗೋಡು, ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಧಾರ್ಮಿಕ ಚಿಂತಕಿ ಸವಿತಾ ಶ್ರೀಕಾಂತ್, ವಕೀಲ ಕೆ.ಎಸ್.ಗೌತಮ್ ಉಪಸ್ಥಿತರಿದ್ದರು.

ಭಜನಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಮನೋನ್ಮಣಿ ಮೂರ್ತಿ ಕಮ್ಮರಡಿ, ವಿದ್ವಾನ್ ಜಿ.ಅರುಣ್‌ಕುಮಾರ್, ವಿದುಷಿ ರೋಹಿಣಿ ಎನ್. ಮೂರ್ತಿ, ಶಿವಾನಂದ ಭಟ್ ಹೆರೂರು ಕೊಪ್ಪ, ವಿದುಷಿ ಉಮಾ ದಿಲೀಪ್ ಶಿವಮೊಗ್ಗ, ನಾಗರಾಜ ಭಟ್, ವಸಂತವಾಣಿ ತೀರ್ಥಹಳ್ಳಿ ಅವರನ್ನು ಗೌರವಿಸಲಾಯಿತು.

ರವೀಂದ್ರ ಕಟ್ಟಿನಕೆರೆ, ಜೋಶಿ ಫೌಂಡೇಷನ್‌ನ ದಿನೇಶಕುಮಾರ್ ಎನ್. ಜೋಶಿ , ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಸವಿತಾ ಪ್ರಭಾಕರ್, ವಿನುತಾ, ಶುಭಾ ನಾಗರಾಜ್ ಇತರರಿದ್ದರು.

ಭಜನೆ ಸ್ಪರ್ಧೆ ವಿಜೇತರು

ಜಿಎಸ್‌ಬಿ ಸಮಾಜ ಭಜನಾ ಮಂಡಳಿ ಸಾಗರ (ಪ್ರ), ದೈವಜ್ಞ ಜ್ಞಾನೇಶ್ವರಿ ಭಜನಾ ಮಂಡಳಿ ಸಾಗರ (ದ್ವಿ), ಗುರುಕೃಪಾ ಭಜನಾ ಮಂಡಳಿ ಸಾಗರ (ತೃ) ಹವ್ಯಕ ಸಿರಿ ಭಜನಾ ಮಂಡಳಿ ಸಾಗರ, ಸಿಗಂದೂರು ಭಜನಾ ಮಂಡಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net