

ಮೈಸೂರು: ಇಡೀ ವಿಶ್ವವೇ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮೀಸಲಾತಿ ಹಾಗೂ ಸರ್ಕಾರಿ ಉದ್ಯೋಗ ಇಲ್ಲವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾಣಿಜ್ಯ ಸಂಸ್ಥೆ (ಡಿಎಸಿಸಿ) ಮಹಾ ನಿರ್ದೇಶಕರಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶಾಸಕರು ಮತ್ತು ಸಂಸದರ ವೇದಿಕೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಇಂದರ್ ಇಕ್ಬಾಲ್‌ಸಿಂಗ್ ಅತ್ವಲ್ ಎಚ್ಚರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವಾಣಿಜ್ಯ ಸಂಸ್ಥೆ (ಡಿಎಸಿಸಿ), ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ನ್ಯಾಯ ವೇದಿಕೆಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತೀಕರಣ, ಉದಾರೀಕಣ, ಖಾಸಗೀಕರಣದತ್ತ ವಿಶ್ವದ ಎಲ್ಲ ದೇಶಗಳು ಸೆಣಸುತ್ತಿದ್ದು, ಭಾರತವೂ ಸಹ ಆರ್ಥಿಕ ಸಬಲೀಕರಣಕ್ಕೆ ಹೋರಾಟ ನಡೆಸುತ್ತಿದೆ. ಬಹುತೇಕ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ವಿವಿಧ ದೇಶಗಳು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಮೀಸಲಾತಿ ಹಾಗೂ ಸರ್ಕಾರಿ ಉದ್ಯೋಗ ಇಲ್ಲವಾಗಬಹುದು ಎಂದು ಹೇಳಿದರು.
ಆರ್ಥಿಕ ಪ್ರಗತಿ ಹಾಗೂ ಸ್ವಾತಂತ್ರ್ಯ ದಲಿತರಿಗೆ ಅಗತ್ಯವಾಗಿದ್ದು, ಆಗ ಮಾತ್ರ ನಾವೂ ಸಬಲರಾಗಲು ಸಾಧ್ಯ. ಅದಕ್ಕೆ ಈಗಿನಿಂದಲೇ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆಯದೆ ಉದ್ಯಮಪತಿಗಳಾಗಿ ನಾಲ್ಕಾರು ಜನರಿಗೆ ಉದ್ಯೋಗ ಕೊಡುವತ್ತ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ದಲಿತರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದರೂ ಗ್ರಾಮೀಣ ಪ್ರದೇಶಗಳಿಗೆ ತಲುಪುತ್ತಿಲ್ಲ. ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ಕೆ ಡಿಎಸಿಸಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಸಿದ್ಧವಿದೆ. ಇದಕ್ಕೆ ದಲಿತ ಸಮಾಜದ ಬೆಂಬಲ ಅಗತ್ಯ ಎಂದು ಹೇಳಿದರು.
ರಾಜ್ಯದಲ್ಲಿ ದಲಿತರ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಗಿರಿಜನ ಉಪ ಯೋಜನೆ (ಟಿಎಸ್‌ಪಿ) ಯೋಜನೆಗಳು ಮಾದರಿಯಾಗಿದ್ದು, ಅರ್ಹರನ್ನು ಗುರುತಿಸಲು, ಯೋಜನೆಗಳನ್ನು ಜಾರಿಗೊಳಿಸಲು ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಮುಖಂಡ ಮಾ.ವೆಂಕಟರಾಮು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಆರ್ಥಿಕ ಸ್ವಾತಂತ್ರೃ ಸಾಧಿಸಬೇಕು, ವಿದೇಶಗಳನ್ನು ಮೆಚ್ಚಿಕೊಳ್ಳದೆ ಸ್ವಾವಲಂಭಿಯಾಗಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಯುವ ಜನಾಂಗ ಬೇರೆಯವರ ಬಳಿ ಉದ್ಯೋಗಕ್ಕೆ ಅಲೆಯದೆ ಸರ್ಕಾರದ ನೆರವು ಪಡೆದು ಸ್ವಾವಲಂಭಿಗಳಾಗಿ ಎಂದು ಸಲಹೆ ನೀಡಿದರು.
ಸರ್ಕಾರ ದಲಿತರಿಗಾಗಿ ಉದ್ಯೋಗದಲ್ಲಿ ಈಗ ಶೇ.18ರಷ್ಟು ಮೀಸಲಾತಿ ನೀಡುತ್ತಿದೆ. ಆದರೆ ಅದನ್ನೇ ನೆಚ್ಚಿಕೊಂಡು ಕುಳಿತುಕೊಂಡರೆ ನಾವೆಲ್ಲಾ ಬಾವಿಯ ಕಪ್ಪೆಯಾಗುತ್ತೇವೆ. ಆದರೆ ಜಗತ್ತು ವಿಶಾಲವಾಗಿದ್ದು, ಸರ್ಕಾರ ಯೋಜನೆಗಳನ್ನು ಪಡೆದು ಸಮುದ್ರದಲ್ಲಿ ಈಜುವುದನ್ನು ಕಲಿಯಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಉದ್ಯೋಗ ಎಂದರೆ ಸರ್ಕಾರಿ ನೌಕರಿಯೇ ಅಗಬೇಕು ಎನ್ನುವ ಮನೋಭಾವನೆ ಬಿಡಬೇಕು. ಈಗ ಸಾಕಷ್ಟು ಇತರ ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ನಮ್ಮೂರು, ನಮ್ಮ ರಾಜ್ಯ ಎಂದು ಕೂರದೆ ಅವಕಾಶಗಳು ಇರುವ ಕಡೆ ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದರು.
ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ, ಬಿಜೆಪಿ ಮುಖಂಡ ಸಿರಿಪ್ರಕಾಶ್ ತನ್ವರ್, ಮಾನಸಗಂಗೋತ್ರಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್.ಗಂಗಾಧರ್, ಸಾಮಾಜಿಕ ಕಾರ್ಯ ವಿಭಾಗದ ಡಾ.ಎಚ್.ಪಿ.ಜ್ಯೋತಿ ಇತರರು ಇದ್ದರು.