ಮುಂದಿನ ತಿಂಗಳು ಕಟ್ಟಡ ಕಾಮಗಾರಿ ಪೂರ್ಣ:ಸಚಿವ ಕೆ.ಎನ್. ರಾಜಣ್ಣ ಭರವಸೆ

ಮುಂದಿನ ತಿಂಗಳು ಕಟ್ಟಡ ಕಾಮಗಾರಿ ಪೂರ್ಣ:ಸಚಿವ ಕೆ.ಎನ್. ರಾಜಣ್ಣ ಭರವಸೆ
Published on

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಸಮೀಪದ ಚನ್ನಪಟ್ಟಣ ಕೆರೆ ನಡುವೆ ನಿರ್ಮಿಸಲಾಗುತ್ತಿರುವ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ತಿಂಗಳು ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಚಿವರನ್ನು ಕರೆಸಿ ಉದ್ಘಾಟಿಸಿಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ್ದು, ಕಟ್ಟಡದ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಹಣ ನೀಡಿದೆ. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡಿದೆ. ಕಟ್ಟಡದ ಸುತ್ತಲಿನ ಕಾಮಗಾರಿಯನ್ನು ನೀರಾವರಿ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದಕ್ಕೆ ಶುದ್ಧ ನೀರನ್ನು ಹಾಕಿ, ಯುಜಿಡಿ ನೀರು ಬರೆದಂತೆ ತಡೆಗಟ್ಟಲು ಈಗಾಗಲೇ ನಗರಸಭೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಏಕೆ ತಡವಾಗಿದೆ ಮತ್ತು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಮುಂದೆ ಏನಾಗಬೇಕು ಎಂಬುದರ ಬಗ್ಗೆ ಮಾತ್ರ ಚಿಂತನೆ ಮಾಡೋಣ ಎಂದು ಹೇಳಿದರು.
ಇದೇ ರೀತಿ ಜಿಲ್ಲೆ ಮತ್ತು ನಗರದಲ್ಲಿ ಹಲವು ಕಾಮಗಾರಿಗಳು ನನೆಗುದ್ದಿಗೆ ಬಿದ್ದಿವೆ. ಅವುಗಳನ್ನು ಪಟ್ಟಿ ಮಾಡಿ ಶೀಘ್ರದಲ್ಲಿ ಅವುಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರನ್ನು ಕರೆಸಿ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಕಾಮಗಾರಿ ವೀಕ್ಷಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ, ಉಪವಿಭಾಗಾಧಿಕಾರಿ ಮಾರುತಿ, ನಗರಸಭೆ ಆಯುಕ್ತ ಸತೀಶ್ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net