ಮುಂದಿನ ಕ್ಯಾಬಿನೆಟ್‌ನಲ್ಲಿ ಸಂತ್ರಸ್ತರಿಗೆ ಉದ್ಯೋಗ ವಿಚಾರ ಚರ್ಚೆ

30Rajesh9
Published on

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗದ ಆಕ್ಸಿಜನ್ ದುರಂತದ ಸಂತ್ರಸ್ತರ ಸರ್ಕಾರಿ ಉದ್ಯೋಗದ ವಿಚಾರವನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ನಿರ್ಧಾರ ಮಾಡುವ ಭರವಸೆ ಸಿಕ್ಕಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮತ್ತು ಸಂಸದ ಸುನೀಲ್‌ಬೋಸ್ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ಆಶ್ವಾಸನೆ ನೀಡಿದರು.

ಕಾಂಗ್ರೆಸ್ ಕೊಟ್ಟಿದ್ದ ಭರವಸೆಯಂತೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದ ಕೊಟ್ಟಿದ್ದ 1 ಲಕ್ಷ ರೂ. ಪರಿಹಾರದ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದರು. ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಬುಧವಾರ ಸಭೆ ಕರೆದು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿತು.

ಈ ವೇಳೆ ಮಾಧ್ಯಮದವರೊಂದಿಗೆ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಎಷ್ಟು ಜನರಿಗೆ ಸರ್ಕಾರಿ ಉದ್ಯೋಗ ಕೊಡಲು ಸಾಧ್ಯವೋ ಅಷ್ಟು ಜನರಿಗೆ ನೌಕರಿ ಕೊಡಲಾಗುವುದು. ಶೈಕ್ಷಣಿಕ ಅರ್ಹತೆ ಇಲ್ಲದವರಿಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಸಂಸದ ಸುನೀಲ್‌ಬೋಸ್ ಮಾತನಾಡಿ, ಇದು ಭರವಸೆ ಕೊಡುವ ಸಭೆಯಲ್ಲ. ನಾವು ವಿರೋಧ ಪಕ್ಷದಲ್ಲಿದ್ದಾಗ ಜನರಿಗೆ ಕೊಟ್ಟಿದ್ದ ಮಾತು. ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿದ್ದೆವು. ಸರ್ಕಾರ ಬಂದು 2 ವರ್ಷಗಳಾಗುತ್ತಿದೆ. ಆದರೂ ಇನ್ನೂ ಸರ್ಕಾರಿ ಉದ್ಯೋಗ ಸಿಗಲಿಲ್ಲವಲ್ಲ ಅನ್ನೋ ಆತಂಕ ಸಂತ್ರಸ್ತರಲ್ಲಿದೆ. ಕುಟುಂಬಸ್ಥರನ್ನು ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿರುವವರಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಉದ್ಯೋಗ ಸಿಗುವ ಭರವಸೆಯನ್ನು ಇಟ್ಟುಕೊಂಡಿದ್ದರು. ಈಡೇರದೆ ಇದ್ದಾಗ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರನ್ನು ಕರೆದು ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

ಏ.9ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ಒಂದು ವೇಳೆ ಈ ಕ್ಯಾಬಿನೆಟ್‌ನಲ್ಲೂ ಆಗದಿದ್ದರೆ ಮುಂದಿನ ಸಚಿವ ಸಂಪುಟದಲ್ಲಿ ವಿಷಯ ಚರ್ಚೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ. ಇದು ಭರವಸೆಯಲ್ಲ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್, ಡಾ.ಮಹೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಣ್ಣೀರಿಟ್ಟ ಮಹಿಳೆ:

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಕಣ್ಣೀರಲ್ಲೇ ಕೈ ತೊಳೆಯುತ್ತಿವೆ. ಸಭೆಯಲ್ಲೂ ಕಣ್ಣೀರಿನ ಕಟ್ಟೆಯೊಡೆಯಿತು. ಸಂತ್ರಸ್ತ ಮಹಿಳೆ ನಾಗರತ್ನ ಮಾತನಾಡಿ, ಸಿಮ್ಸ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ತಿಳಿಸಲಾಗಿತ್ತು. ನನ್ನ ಪತಿ ಮೃತಪಟ್ಟ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹಿಂಸೆಯಾಗುತ್ತದೆ. ನಮ್ಮ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಡಿ ಗ್ರೂಪ್ ಕೆಲಸ ಕೊಟ್ಟರೂ ಸಿಮ್ಸ್‌ಗೆ ಹಾಕಬೇಡಿ. ನಮ್ಮವರನ್ನು ಕಳೆದುಕೊಂಡು 4 ವರ್ಷಗಳಾಗುತ್ತಿದೆ. ನಮಗೆ ಜೀವನ ಮಾಡಲು ತೊಂದರೆಯಾಗುತ್ತಿದೆ ಎಂದು ಗದ್ಗದಿತರಾದರು.

ಉಸ್ತುವಾರಿ ಕಾರ್ಯದರ್ಶಿಗೆ ಕರೆ:

ಸಂತ್ರಸ್ತರೊಂದಿಗೆ ಮಾತುಕತೆ ನಡೆಸುವ ವೇಳೆ ಸಂಸದ ಸುನೀಲ್‌ಬೋಸ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇ.ಮಣಿವಣ್ಣನ್ ಅವರಿಗೆ ಕರೆ ಮಾಡಿದರು. ಸಂತ್ರಸ್ತರಿಗೆ ಉದ್ಯೋಗ ನೀಡುವ ವಿಷಯವನ್ನು ಮೇ 9ರಂದು ನಡೆಯಲಿರುವ ಕ್ಯಾಬಿನೆಟ್‌ನಲ್ಲಿ ಮುಂದಿಡಬೇಕಾಗಿದೆ. ಇವರಿಗೆಲ್ಲ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಸಂತ್ರಸ್ರರಾದ ಮಂಜುನಾಥ್ ಮಾತನಾಡಿ, ಇದೊಂದು ಭಾವನಾತ್ಮಕ ವಿಚಾರ. ನಮಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಉದ್ಯೋಗ ಬೇಡಿ. ಖಾಯಂ ಉದ್ಯೋಗವನ್ನೇ ನೀಡಿ ಎಂದು ಹೇಳಿಕೊಂಡರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಪಟ್ಟಿಯನ್ನು ಓದಿ ಖಚಿತ ಪಡಿಸಿಕೊಂಡರು. ಈ ವೇಳೆ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಡುಕಲಮೋಳೆಯ ಶಂಕರ ಕೂಡ ಮೃತಪಟ್ಟರು. ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿಕೊಳ್ಳಿ ಎಂದರು.

ಡಿಸಿ, ಎಸ್ಪಿ ಕಾಳಜಿ:

ಸಭೆಯಲ್ಲಿ ಸಂತ್ರಸ್ತರಿಗೆ ಉದ್ಯೋಗ ಕೊಡಿಸುವ ವಿಚಾರವನ್ನು ಸರ್ಕಾರದ ಗಮನ ಸೆಳೆಯಲು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮತ್ತು ಎಂಪಿ ಸುನೀಲ್‌ಬೋಸ್ ಅವರಿಗೆ ಡಿಸಿ ಶಿಲ್ಪಾನಾಗ್ ಪರಿಸ್ಥಿತಿಯನ್ನು ವಿವರಿಸಿದರು. ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವುದರಿಂದ ಮೃತರ ಮನೆಯವರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆರ್ಥಿಕ ಸಮಸ್ಯೆಯಾಗುತ್ತದೆ ಎಂದು ಕಾಳಜಿಯ ಮಾತನಾಡಿದರು. ಜಿಲ್ಲಾಡಳಿತ ಸದಾಕಾಲ ನಿಮ್ಮೊಂದಿಗೆ ಇರಲಿದೆ. ಕಚೇರಿಯಲ್ಲಿ ನಿಮ್ಮ ಸಂಪರ್ಕಕ್ಕೆ ನಾನು ಲಭ್ಯವಿರುತ್ತೇನೆ ಎಂದರು. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕೆಂದು ಎಸ್ಪಿ ಡಾ.ಬಿ.ಟಿ.ಕವಿತಾ ಕೇಳಿಕೊಂಡರು. ಪ್ರಕರಣದಲ್ಲಿ ನ್ಯಾಯ ಕೊಡಿಸಲು ನಿರಂತರವಾಗಿ ಹೋರಾಟ ಮಾಡುತ್ತಿರುವ ಎಸ್‌ಡಿಪಿಐ ಪಕ್ಷದ ನಗರಸಭೆ ಸದಸ್ಯ ಮಹೇಶ್, ಕಲೀಲ್‌ವುಲ್ಲ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನು ಬೇಗ ನೀಡಬೇಕೆಂದು ಮಹೇಶ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net