ಮುಂದಾಲೋಚನೆಯಿಂದ ವಿಶ್ವದ ಮನಗೆದ್ದ ಮೋದಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಹೊಂಬಯ್ಯ ಅಭಿಮತ

photo tgl 1(19.9.2021) modi birthday tgl
Published on

ತ್ಯಾಮಗೊಂಡ್ಲು: ದಿಟ್ಟ ನಿರ್ಧಾರ ಮತ್ತು ಅತ್ಯುತ್ತಮ ಮುಂದಾಲೋಚನೆಯಿಂದ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಶತಮಾನದ ವ್ಯಕ್ತಿ ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರು ವ್ಯಕ್ತಿಯಲ್ಲ ಒಂದು ಚೇತನ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಹೊಂಬಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ದೇವರಾಜ ಮೊದಲಿಯಾರ್ ವೃತ್ತದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ನರೇಂದ್ರ ಮೋದಿ ಜನ್ಮದಿವಸದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಅನ್ನದಾನ ಮತ್ತು ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೋದಿ ಅವರ ಸುಭದ್ರ ಆಡಳಿತದಲ್ಲಿ ದೇಶದ ಜನತೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ವಿಶ್ವದಲ್ಲಿ ಕನಿಷ್ಠ ಸ್ಥಾನದಲ್ಲಿದ್ದ ಭಾರತವನ್ನು ವಿಶ್ವಗುರುವಾಗಿ ಮಾಡುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

ಕೇಂದ್ರದ ಯೋಜನೆಗಳ ಫಲಾನುಭವಿಗಳು ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸುವ ಪತ್ರ ಬರೆಯುವ ಅಭಿಯಾನ ಕೂಡ ಇಂದಿನಿಂದ ಆರಂಭವಾಗಿದೆ ಎಂದು ನೆಲಮಂಗಲ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೊಡಿಗೆಹಳ್ಳಿ ಮಂಜುನಾಥ್ ಹೇಳಿದರು.

ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಮಾತನಾಡಿ, ಹೋಬಳಿಯ ದೊಡ್ಡಬೆಲೆ, ಮಣ್ಣೆ, ಅರೆಬೊಮ್ಮನಹಳ್ಳಿ, ಕುಲವನಹಳ್ಳಿ, ಕೊಡಿಗೇಹಳ್ಳಿ, ಹಸಿರುವಳ್ಳಿ ಹಾಗೂ ಕಳಲುಘಟ್ಟ ಗ್ರಾಪಂನ ಎಲ್ಲ ಗ್ರಾಮಗಳಲ್ಲೂ ಸೇವಾ ಸಪ್ತಾಹ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಪ್ರಧಾನಿ ಮೋದಿ ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಲಾಯಿತು. ಎಸ್‌ಟಿ ಮೋರ್ಚಾ ಅಧ್ಯಕ್ಷ ಬಿ.ಎಸ್. ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್. ಶ್ರೀನಿವಾಸ್, ಯುವ ಮೋರ್ಚಾ ಕಾರ್ಯದರ್ಶಿ ಸಿ. ತೇಜಸ್, ಹೋಬಳಿ ಕಾರ್ಯದರ್ಶಿ ಲಕ್ಷ್ಮಣ್, ಗ್ರಾಪಂ ಮಾಜಿ ಸದಸ್ಯ ಜಗದೀಶ್‌ಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌಮ್ಯಾ, ಅರೆಬೊಮ್ಮನಹಳ್ಳಿ ಗ್ರಾಪಂ ಸದಸ್ಯ ತಿಮ್ಮರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net