ಮುಂಡರಗಿ ಪುರಸಭೆ ಸದಸ್ಯರಿಂದ ಇಂಜಿನಿಯರ್ ತರಾಟೆಗೆ

18MDG1 PURASABHE KAMAGARI
Published on

ಮುಂಡರಗಿ: ಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹೆಚ್ಚುವರಿ ಬಿಲ್ ತೆಗೆದು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಪುರಸಭೆಯ ಕೆಲ ಸದಸ್ಯರು 19ನೇ ವಾರ್ಡ್​ನಲ್ಲಿ ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಜಿ.ಎನ್. ಗೋನಾಳ ಅವರ ಸಮ್ಮುಖದಲ್ಲಿ ಪುರಸಭೆ ಇಂಜಿನಿಯರ್ ವಿ.ಪಿ. ಕಾಟೇವಾಳೆ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

19ನೇ ವಾರ್ಡ್​ನಲ್ಲಿ ಸುಮಾರು 40 ಅಡಿ ಉದ್ದದ ಚರಂಡಿಯ ಮೇಲೆ ಪಾಟಿಕಲ್ಲು ಹಾಕಿ ಅದರ ಮೇಲೆ ಸಿಮೆಂಟ್ ಕಾಮಗಾರಿ ಮಾಡಲಾಗಿದೆ. ಚರಂಡಿ ನಿರ್ಮಾಣ ಕಾಮಗಾರಿ ಹೆಸರಿನ ಮೇಲೆ ಎರಡು ಬಾರಿ ಬಿಲ್ ತೆಗೆದಿದ್ದೀರಿ. ಒಮ್ಮೆ 89,766 ರೂಪಾಯಿ, ಮತ್ತೊಮ್ಮೆ 83,031ರೂಪಾಯಿ ಸೇರಿ 1,72,797 ರೂಪಾಯಿ ಬಿಲ್ ತೆಗೆಯಲಾಗಿದೆ. ಹೆಚ್ಚುವರಿ ಬಿಲ್ ತೆಗೆಯುವ ಮೂಲಕ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ ಎಂದು ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಅವರು ಅಧಿಕಾರಿಗಳ ವಿರುದ್ಧ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ವ್ಯಾಪ್ತಿಯ 19ನೇ ವಾರ್ಡ್​ನಲ್ಲಿ ಮಾತ್ರವಲ್ಲ, ಬಹುತೇಕ ಕಡೆಗಳಲ್ಲಿ ಇಂತಹ ಅನೇಕ ಅವ್ಯವಹಾರಗಳು ನಡೆದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಇಇ ಜಿ.ಎನ್. ಗೋನಾಳ ಅವರನ್ನು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಎಇಇ ಜಿ.ಎನ್. ಗೋನಾಳ ಅವರು, ಕಾಮಗಾರಿ ಪರಿಶೀಲಿಸಲಾಗಿದೆ. ಈ ಕುರಿತು ದಾಖಲೆ ಪರಿಶೀಲಿಸಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ನಾಗೇಶ ಹುಬ್ಬಳ್ಳಿ, ರಾಜೇಸಾಬ್ ಬೆಟಗೇರಿ, ಪವನ ಮೇಟಿ, ಪ್ರಕಾಶ ಹಲವಾಗಲಿ, ಮುಖಂಡರಾದ ಪರುಶುರಾಮ ಕರಡಿಕೊಳ್ಳ, ನಾಗರಾಜ ಕೊರ್ಲಹಳ್ಳಿ, ಅಂದಪ್ಪ ಬಳ್ಳಾರಿ, ಪರಶುರಾಮ ಸುಣಗಾರ, ಮುಖ್ಯಾಧಿಕಾರಿ ಎನ್.ಕೆ. ಡೊಂಬರ, ಪುರಸಭೆ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net