ಮುಂಜಾಗ್ರತೆ ವಹಿಸುವಲ್ಲಿ ಜನರ ನಿರ್ಲಕ್ಷ್ಯ, ಪರಸ್ಪರ ಅಂತರಕ್ಕೆ ಪುಲ್‌ಸ್ಟಾಪ್, ಮಾಸ್ಕೂ ಮಾಯ!

13CBP2
Published on

ಚಿಕ್ಕಬಳ್ಳಾಪುರ: ಕರೊನಾ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಬಹುತೇಕ ಜನರು ಮಾಸ್ಕ್ ಧರಿಸುವುದನ್ನೇ ಮರೆತಿದ್ದಾರೆ, ಕರೊನಾ ಭಯವನ್ನೇ ಬಿಟ್ಟು ಪರಸ್ಪರ ಅಂತರ ಕಾಪಾಡುವುದಕ್ಕೂ ಪುಲ್‌ಸ್ಟಾಪ್, ಇಟ್ಟಿದ್ದಾರೆ, ಮಾಸ್ಕ್‌ಗಳೂ ಮಾಯವಾಗಿವೆ.

ಸೋಂಕು ಹರಡುವಿಕೆಯ ಪ್ರಾರಂಭದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರು. ಆದರೀಗ ಮಾಸ್ಕ್ ಧರಿಸದೇ ರಾಜಾರೋಷವಾಗಿ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಚಳಿಜ್ವರ, ಕೆಮ್ಮು, ನೆಗಡಿ ಹೆಚ್ಚಾಗಿ ಕಂಡು ಬರುವ ಮಳೆಗಾಲದ ಸಂದರ್ಭದಲ್ಲಿ ಜನರ ನಿರ್ಲಕ್ಷೃ ವಹಿಸುತ್ತಿರುವುದು ಸೋಂಕು ವ್ಯಾಪಕವಾಗಿ ಹರಡುವ ಆತಂಕವನ್ನುಂಟು ಮಾಡಿದೆ.

ಲಾಕ್‌ಡೌನ್ ಸಡಿಲಿಕೆಯ ಬಳಿಕ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಎಂದಿನಂತೆ ಜನ ಮತ್ತು ವಾಹನ ಸಂಚಾರ, ವಹಿವಾಟು ನಡೆಯುತ್ತಿದೆ, ಮಾರುಕಟ್ಟೆ, ಬಸ್ ನಿಲ್ದಾಣ, ಅಂಗಡಿ, ಹೋಟೆಲ್ ಬಳಿ ಜನರು ಹೆಚ್ಚಿಗೆ ಸೇರುತ್ತಿದ್ದಾರೆ.ಇದೇ ವೇಳೆ ಕೆಲವರು ಮಾಸ್ಕ್ ಧರಿಸುತ್ತಿಲ್ಲ. ಸೋಂಕಿನ ಯಾವುದೇ ಭಯವಿಲ್ಲದೇ ಇತರರೊಂದಿಗೆ ಬೆರೆಯುತ್ತಿದ್ದಾರೆ. ಪ್ರಶ್ನಿಸುವವರಿಗೆ ಉಡಾೆ ಹೇಳಿಕೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಜುಲೈ, ಆಗಸ್ಟ್‌ನಲ್ಲಿ ಪ್ರಕರಣಗಳು ಹೆಚ್ಚಾಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ, ಇನ್ನು ಪ್ರತಿ ಕಾರ್ಯಕ್ರಮದಲ್ಲೂ ಸೋಂಕಿನ ತಡೆಯ ಮಾರ್ಗೋಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಅನೇಕರು ಕಿವಿಗೊಡುತ್ತಿಲ್ಲ.

ಅಂತರ ಅತಂತ್ರ, ಮಾಸ್ಕ್ ಮಾಯ: ಜನಜಂಗುಳಿ ಹೆಚ್ಚಾಗಿರುವ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಮಾಸ್ಕ್ ಧರಿಸುವಿಕೆ ಕಡ್ಡಾಯಗೊಳಿಸಲಾಗಿದೆ. ಆದರೆ, ಈ ನಿಯಮ ಉಲ್ಲಂಸಲಾಗುತ್ತಿದೆ. ಕೆಲಸದ ವೇಳೆ ಒತ್ತಡ, ಮಾಸ್ಕ್ ನಿಂದ ಹೊಸದಾಗಿ ಉಸಿರಾಟ ಸಮಸ್ಯೆ, ಮಾತನಾಡಲು ಕಷ್ಟ ಎಂಬ ನಾನಾ ಸಬೂಬುಗಳನ್ನು ಹೇಳಲಾಗುತ್ತಿದೆ. ಈಗಾಗಲೇ ಪರಸ್ಪರ ಅಂತರ ಎನ್ನುವುದು ಬಹುತೇಕ ದೂರವಾಗಿದೆ. ಈಗ ಮಾಸ್ಕ್ ಧರಿಸುವಿಕೆಯನ್ನು ಕೈ ಬಿಡಲಾಗುತ್ತಿದೆ.

ಕರೊನಾ ಸೋಂಕು ಹರಡುವಿಕೆ ತಡೆಗೆ ಜನರು ಪರಸ್ಪರ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಆರ್.ಲತಾ, ಜಿಲ್ಲಾಧಿಕಾರಿ

ಕಡಿವಾಣಕ್ಕೆ ದಂಡ ಪ್ರಯೋಗ: ಮಾಸ್ಕ್ ಧರಿಸದಿರುವವರಿಗೆ ಎಚ್ಚರಿಕೆ ನೀಡುವುದರ ಜತೆಗೆ ದಂಡ ವಿಧಿಸುವ ಮೂಲಕ ನಗರಸಭೆ ಮತ್ತು ಪೊಲೀಸ್ ಸಿಬ್ಬಂದಿ ಪಾಠ ಕಲಿಸಲು ಮುಂದಾಗಿದ್ದಾರೆ. ಮೊದಲು ವಾಹನ ಚಾಲನಾ ಪರವಾನಗಿ ಸೇರಿ ಇತರೆ ದಾಖಲೆ ಹೊಂದಿರದಿರುವುದು, ಸಂಚಾರಿ ನಿಯಮಗಳ ಉಲ್ಲಂಘನೆಗೆ ಆದ್ಯತೆ ನೀಡುತ್ತಿದ್ದ ಪೊಲೀಸರು, ಇದೀಗ ಮಾಸ್ಕ್ ಕೇಳುತ್ತಿದ್ದಾರೆ. ಹಾಗೆಯೇ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದ ಜನರಿಗೆ ದಂಡ ವಿಧಿಸುತ್ತಿದ್ದ ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸದಿರುವವನ್ನು ಹಿಡಿಯುತ್ತಿದ್ದಾರೆ.

ಈಗಾಗಲೇ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ, ಆದರೂ ಜನರು ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ. ಕರೊನಾ ಸೋಂಕು ತಡೆಗೆ ಎಲ್ಲ ಸಹಕಾರ ಅಗತ್ಯ. ಲೋಹಿತ್, ಪೌರಾಯುಕ್ತ, ಚಿಕ್ಕಬಳ್ಳಾಪುರ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net