

ನರಗುಂದ: ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನವಿಲುತೀರ್ಥ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಂಗುರ ಹಾಕಿಸಲಾಗುತ್ತಿದೆ.
ತಾಲೂಕಿನ ವಾಸನ, ಬೆಳ್ಳೇರಿ, ಲಖಮಾಪುರ, ಶಿರೋಳ, ಕಪಲಿ, ಕಲ್ಲಾಪುರ ಹಾಗೂ ಬೆಣ್ಣಿಹಳ್ಳದ ಪ್ರವಾಹಕ್ಕೆ ತುತ್ತಾಗುವ ಸುರಕೋಡ, ಬನಹಟ್ಟಿ, ಮೂಗನೂರ, ಕುರ್ಲಗೇರಿ ಮುಂತಾದ ಗ್ರಾಮಗಳಲ್ಲಿ ಶುಕ್ರವಾರ ಆಯಾ ಗ್ರಾಪಂನವರು ಡಂಗುರ ಸಾರುತ್ತಿದ್ದಾರೆ. ಅಲ್ಲದೆ ಪ್ರವಾಹದ ಕುರಿತು ವಿವಿಧ ಗ್ರಾಪಂಗಳಲ್ಲಿ ರಚಿಸಲಾಗಿರುವ ಕಾರ್ಯಪಡೆ ಸಮಿತಿ ಸದಸ್ಯರ ತುರ್ತು ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ರ್ಚಚಿಸಲಾಗಿದೆ.
ಮಲಪ್ರಭಾ ಜಲಾಶಯದಿಂದ ಶುಕ್ರವಾರ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಗ್ರಾಮಸ್ಥರು ಅಗತ್ಯ ವಸ್ತು, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಜಲಾಶಯದ ಮಟ್ಟ ಹೆಚ್ಚಾಗುವ ಸಂಭವವಿದ್ದು, ನೀರನ್ನು ಬಿಡುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದು, ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮನವಿ ಮಾಡಿದ್ದಾರೆ.
ಹೈಅಲರ್ಟ್ ಘೊಷಣೆ
ಗದಗ: ನವೀಲುತೀರ್ಥ ಜಲಾಶಯ ತುಂಬಿ ಹರಿಯತೊಡಗಿದೆ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಜಲಾಶಯದ ಕೆಳಭಾಗದಲ್ಲಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತ ಹೈಅಲರ್ಟ್ ಘೊಷಣೆ ಮಾಡಿದೆ. ಇದರ ಜತೆಗೆ ಬೆಣ್ಣಿಹಳ್ಳ ಸಹ ಉಕ್ಕಿ ಹರಿಯುತ್ತಿದೆ. ಹೊಳೆಆಲೂರಲ್ಲಿ ಪ್ರವಾಹ ಭೀತಿ ಆರಂಭವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶಗಳಾದ ಜಿಲ್ಲೆಯ ಶಿರಹಟ್ಟಿ ತಾಲೂಕಿನ 10 ಗ್ರಾಮಗಳು, ಮುಂಡರಗಿ ತಾಲೂಕಿನ 11 ಗ್ರಾಮಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ವರ್ಷ ನೆರೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಉಂಟಾಗಿತ್ತು.
ನರಗುಂದದಲ್ಲಿ ಮತ್ತೆ ಐದು ಮನೆ ಕುಸಿತ
ನರಗುಂದ: ಪಟ್ಟಣದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶುಕ್ರವಾರ ಬೆಳಗಿನ ಜಾವ ಐದು ಮನೆಗಳ ಗೋಡೆಗಳು ಸಂಪೂರ್ಣ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಪಟ್ಟಣದ ದಂಡಾಪೂರ ಅಂಬೇಡ್ಕರ್ನಗರ ಬಡಾವಣೆಯ ಭೀಮವ್ವ ಷಣ್ಮುಖಪ್ಪ ದೊಡಮನಿ, ಗಂಗವ್ವ ಹುಸನಪ್ಪ ಈಟಿ, ಹನುಮವ್ವ ಮಾನಪ್ಪ ದೊಡಮನಿ, ನಿಂಗವ್ವ ದೊಡಮನಿ, ಲೋಧಿ ಗಲ್ಲಿಯ ಅಬ್ದುಲ್ಸಾಬ್ ನಾಲಬಂದ ಎಂಬುವವರ ಮನೆಯ ಗೋಡೆಗಳು ಕುಸಿದಿವೆ. ಸತತ ಮಳೆಯಿಂದಾಗಿ ಮನೆಗಳೆಲ್ಲ ಸಂಪೂರ್ಣವಾಗಿ ನೆನೆದು ಕುಸಿದು ಬಿದ್ದಿವೆ. ಶುಕ್ರವಾರವೂ ಮಳೆರಾಯ ಅಬ್ಬರಿಸಿದ್ದಾನೆ.
EndFragment