ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಸಡಗರ ; ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ರಸಗೊಬ್ಬರ ದಾಸ್ತಾನು

11
Published on

ತುಮಕೂರು: ಮುಂಗಾರು ಹಂಗಾಮಿನಲ್ಲಿ 381300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೂ 136984(ಶೇ.36) ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯ ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ 21942 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಈಗಾಗಲೇ ರೈತರಿಗೆ ಸಹಾಯಧನದಡಿ 17462 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಬೇಡಿಕೆಗನುಗುಣವಾಗಿ ಹೆಚ್ಚಿನ ಪ್ರಮಾಣದ ಬಿತ್ತನೆ ಬೀಜ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಭರವಸೆ ನೀಡಿದೆ.

ಪ್ರಮಾಣಿತ ಬಿತ್ತನೆ ಬೀಜಗಳನ್ನು ವಿತರಿಸುವಾಗ ಸ್ವಪರಾಗಸ್ಪರ್ಶಿ (ಹೈಬ್ರಿಡ್ ತಳಿಗಳ ಹೊರತುಪಡಿಸಿ) ಬೆಳೆಗಳಲ್ಲಿ ಬೀಜ ಬದಲಿಕೆ ಸೂತ್ರದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ರೈತರು ಪ್ರಸಕ್ತ ಸಾಲಿನಲ್ಲಿ ಬೆಳೆಯುವ ಪೈರಿನಲ್ಲಿ ಬಿತ್ತನೆ ಬೀಜಕ್ಕೋಸ್ಕರ ಉತ್ತಮ ಮತ್ತು ದೃಢವಾದ ಬೀಜಗಳನ್ನು ತಮ್ಮಲ್ಲೇ ದಾಸ್ತಾನು ಮಾಡಿಕೊಳ್ಳಲು ಹಾಗೂ ಮುಂದಿನ ವರ್ಷಗಳಲ್ಲಿ ಬಿತ್ತನೆಗೆ ಉಪಯೋಗಿಸಲು ಕೋರಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರೈತರು ಇಲಾಖೆ ಸೂಚಿಸಿದ ನಿಗದಿತ ಬೆಳೆಗೆ ವಿಮೆ ನೋಂದಣಿ ಮಾಡಬಹುದು.

ವಿಮೆ ನೋಂದಣಿ ಮಾಡಿಸಲು ಮುಸುಕಿನ ಜೋಳ, ನವಣೆ, ಸಜ್ಜೆ, ರಾಗಿ, ತೊಗರಿ, ಭತ್ತ, ಸೂರ್ಯಕಾಂತಿ, ನೆಲಗಡಲೆ, ಅಲಸಂದೆ, ಹತ್ತಿ, ಟೊಮ್ಯಾಟೊ, ಈರುಳ್ಳಿ, ಬೆಳೆಗಳಿಗೆ ಜು.31 ಹಾಗೂ ರಾಗಿ (ನೀರಾವರಿ), ಸಾವೆ(ಮಳೆ ಆಶ್ರಿತ), ಹುರುಳಿ(ಮಳೆ ಆಶ್ರಿತ) ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನಾಂಕವಾಗಿದೆ. ರೈತರು ನಿಗದಿತ ದಿನಾಂಕದೊಳಗೆ ವಿಮಾ ಕಂತನ್ನು ಪಾವತಿಸಿ ಫಸಲ್ ಬಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.

ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ, ರೈತರು ಬಯಸುವ ತಳಿಯ ರಾಗಿ ಕೂಡ ಲಭ್ಯವಿದ್ದು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ರಾಜಸುಲೋಚನ ಕೃಷಿ ಜಂಟಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net