ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರು

23kdla
Published on

ಮಂಜುನಾಥ ಶಿವಕ್ಕನವರ ಕುಂದಗೋಳ

ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿರುವ ರೈತರು ಬೀಜ, ಗೊಬ್ಬರ ಸಂಗ್ರಹದಲ್ಲಿ ತೊಡಗಿದ್ದಾರೆ.

ಪ್ರಸಕ್ತ ವರ್ಷ ತಾಲೂಕಿನಲ್ಲಿ 4400 ಹೆಕ್ಟೇರ್ ಪ್ರದೇಶಲ್ಲಿ ಬಿತ್ತನೆ ಗುರಿ ಹೊಂದಿದ್ದು, ಶೇಂಗಾ, ಬಿಟಿ ಹತ್ತಿ, ಮೆಣಸಿನಕಾಯಿ, ಗೋವಿನಜೋಳ ಹೆಚ್ಚು ಬಿತ್ತನೆಯಾಗುವ ಸಾಧ್ಯತೆ ಇದೆ. ಕೃಷಿ ಇಲಾಖೆಯಲ್ಲಿ 692 ಕ್ವಿಂಟಾಲ್ ಶೇಂಗಾ, 413 ಕ್ವಿಂ. ಸೋಯಾಬೀನ್, 46 ಕ್ವಿಂ. ಗೋವಿನಜೋಳ, 39 ಕ್ವಿಂ. ಹೆಸರು, 8 ಕ್ವಿಂ. ಉದ್ದು, 4 ಕ್ವಿಂಟಾಲ್ ತೊಗರಿ ಬೀಜ ದಾಸ್ತಾನಿದೆ.

ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾದರೆ ರೈತರು ಬೀಜ ಖರೀದಿಗೆ ಒಮ್ಮೆಲೇ ಆಗಮಿಸುತ್ತಾರೆ. ಅವರ ಅಗತ್ಯಕ್ಕೆ ತಕ್ಕಷ್ಟು ಬೀಜ ಪೂರೈಕೆಯಾಗದಿದ್ದರೆ ಪರದಾಟ ಶುರುವಾಗುತ್ತದೆ. ಇನ್ನು 400 ಕ್ವಿಂ. ಶೇಂಗಾ, 200 ಕ್ವಿಂ. ಸೋಯಾಬೀನ್, 20 ಕ್ವಿಂ. ಗೋವಿನ ಜೋಳ, 10 ಕ್ವಿಂ. ಹೆಸರು, 4 ಕ್ವಿಂ. ಉದ್ದು ಬೀಜಗಳ ಕೊರತೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಬಿತ್ತನೆ ಗುರಿ 4,300 ಹೆಕ್ಟೇರ್ ಪೈಕಿ 3900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 300 ಕ್ವಿಂ. ಶೇಂಗಾ ಬೀಜ ಕೊರತೆಯಾಗಿತ್ತು. ಸೋಯಾಬೀನ್, ಗೋವಿನಜೋಳ ಸಹ ಕೊರತೆಯಾಗಿದ್ದವು. ಆದರೆ, ಕೃಷಿ ಇಲಾಖೆ ಈಗ ಸಂಗ್ರಹಿಸಿರುವ ಬೀಜಗಳು ಶೇ. 30ರಷ್ಟು ಮಾತ್ರ.

ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಕಷ್ಟದಲ್ಲಿದ್ದು ಬೀಜ, ಗೊಬ್ಬರವನ್ನು ಸರ್ಕಾರ ಉಚಿತವಾಗಿ ನೀಡಿದರೆ ಅನುಕೂಲವಾಗುತ್ತದೆ. ಗುಣಮಟ್ಟದ ಬೀಜ ವಿತರಣೆ ಆಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು.| ಶರೀಫ ತಳವಾರ ಬೆನಕನಹಳ್ಳಿ ರೈತ

ಜೂನ್ ಮೊದಲ ಹಾಗೂ ಎರಡನೇ ವಾರದಲ್ಲಿ ಬಿತ್ತನೆ ಮಾಡಬಹುದು. ರೈತರ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ವಿತರಿಸಲಾಗುವುದು. ಕರೊನಾ ವೈರಸ್ ಇರುವುದರಿಂದ ಮಾಸ್ಕ್ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಬೀಜಗಳನ್ನು ಖರೀದಿಸಬೇಕು. ಬೀಜ ಪಡೆಯಲು ರೈತರು ತಮ್ಮ ಖಾತೆ ಉತಾರ, ಆಧಾರ್ ಕಾರ್ಡ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಪುಸ್ತಕ ನೀಡಬೇಕು.| ಸದಾಶಿವಯ್ಯ ಖನೂರು ಕೃಷಿ ತಾಲೂಕು ಸಹಾಯಕ ನಿರ್ದೇಶಕ, ಕುಂದಗೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net