

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಭಾನುವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಧಾರಾಕಾರ ಮಳೆ ಹಾಗೂ ಬಾರಿ ಗಾಳಿಯಿಂದಾಗಿ ಚಲಿಸುತ್ತಿದ್ದ ಆಟೋ ಮೇಲೆ ಮರ ಮುರಿದು ಬಿದ್ದ ಪರಿಣಾಮ ಆಟೋ ಚಾಲಕ ರತ್ನಾಕರ(38) ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೊಗ್ರೆಯ ಜಾಳ್ಮಾರದಲ್ಲಿ ನಡೆದಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಭದ್ರಾ ಹಿನ್ನೀರು ವೀಕ್ಷಣೆಗೆ ತಾಯಿಯೊಂದಿಗೆ ಬಂದಿದ್ದ ಯುವಕ ಕಾಲು ಜಾರಿ ಭದ್ರಾ ಹಿನ್ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಗೌತಮ್(19) ಮೃತ ಯುವಕ. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.