

ಬಳ್ಳಾರಿ : ಈ ವರ್ಷದ ಮುಂಗಾರು ಮಳೆ ಅನ್ನದಾತರ ಕೈ ಹಿಡಿಯುವ ವಿಶ್ವಾಸವಿದ್ದು, ಗಣಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಚಟುವಟಿಕೆ ಆರಂಭವಾಗಿವೆ.
ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ಇದ್ದರಿಂದ ಜಿಲ್ಲೆಯಲ್ಲಿ ಶೇ 100% ಬಿತ್ತನೆ ಚಟುವಟಿಕೆ ನಡೆಯಲಿಲ್ಲ.
ಶೇ 80% ರಷ್ಟು ಮಾತ್ರ ಕೃಷಿ ಚಟುವಟಿಕೆ ನಡೆದರೂ ಮಳೆ ಬಾರದೇ ಅನೇಕ ಬೆಳೆಗಳು ನೀರಿಲ್ಲದೇ ಒಣಗಿ ರೈತರು ಸಂಕಷ್ಟ ಎದುರಿಸಿದರು. ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ 1.73 ಲಕ್ಷ ಹೆಕ್ಟೇರ್ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆಯು ಹೊಂದಿದ್ದು, ಈಗಾಗಲೇ ಕೆಲವು ಕಡೆ ಬಿತ್ತನೆ ಆರಂಭಿಸಲಾಗಿದೆ. ಪ್ರಮುಖ ಬೆಳೆಗಳಾದ ಭತ್ತ 95 ಸಾವಿರ ಹೆಕ್ಟೇರ್, ಹತ್ತಿ 35 ಸಾವಿರ ಹೆಕ್ಟೇರ್, ಮೆಕ್ಕೆಜೋಳ 25 ಸಾವಿರ ಹೆಕ್ಟೇರ್, ಸಜ್ಜೆ 2500 ಸಾವಿರ ಹೆಕ್ಟೇರ್, ತೊಗರಿ ಆರು ಸಾವಿರ ಹೆಕ್ಟೇರ್, ಸಿರಿಧಾನ್ಯ ಮೂರು ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಸಿರುಗುಪ್ಪ, ಕಂಪ್ಲಿ ಭಾಗದಲ್ಲಿ ಭತ್ತದ ಆರ್‌ಎನ್‌ಆರ್ ಹಾಗೂ ಸೋನಾ ಮಸೊರಿ ತಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡಲಾಗುತ್ತದೆ. ಬಳ್ಳಾರಿ ತಾಲೂಕು, ಸಂಡೂರು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರೀತ ಪ್ರದೇಶ ಇರುವುದರಿಂದ ಮೆಕ್ಕೆಜೋಳ, ಹತ್ತಿ ಹಾಗೂ ತೊಗರಿ ಬೆಳೆ ಬಿತ್ತನೆ ಮಾಡಲು ರೈತರು ಆಸ್ಥೆ ವಹಿಸುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ.
ಅಗತ್ಯ ರಸಗೊಬ್ಬರ : ಜಿಲ್ಲೆಯಲ್ಲಿ ಬಿತ್ತನೆ ಆರಂಭಕ್ಕೂ ಮುನ್ನವೆ ಕೃಷಿ ಇಲಾಖೆಯಿಂದ ಅಗತ್ಯವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.. ಡಿಎಪಿ 45 ಸಾವಿರ, ಯೂರಿಯ 35 ಸಾವಿರ, ಕಾಂಪ್ಲೆಕ್ಸ್ ಹಾಗೂ ಪೊಟಾಶಿಯಂ 30 ಸಾವಿರ ಸೇರಿ ಒಟ್ಟಾರೆ ರೈತರಿಗೆ ಮುಂಗಾರಿಗೆ ಅಗತ್ಯವಿರಷ್ಟು 1.10 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿದೆ.
2500 ಸಾವಿರ ಕ್ವಿಂಟಾಲ್ ಭತ್ತದ ಬೀಜ, 1500 ಕ್ವಿಂಟಾಲ್ ಮೆಕ್ಕೆಜೋಳ ಬೀಜ, 300 ಕ್ವಿಂಟಾಲ್ ತೊಗರಿ, 600 ಕ್ವಿಂಟಾಲ್ ಶೇಂಗಾ, 300 ಕ್ವಿಂಟಾಲ್ ಬಿಳಿ ಜೋಳ, ನೂರು ಕ್ವಿಂಟಾಲ್ ಸೂರ್ಯ ಕಾಂತಿ ಬೀಜಗಳು ಖರೀದಿ ಕೇಂದ್ರಗಳಲ್ಲಿ ಸಂಗ್ರಹ ಮಾಡಲಾಗಿದೆ.
ಈ ಬಾರಿ ಮೆಣಸಿನಕಾಯಿ ಬಿತ್ತನೆ ಕಡಿಮೆ : ಕಳೆದ ವರ್ಷ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ, ಸಿಜೆಂಟ್, 5531, ಗುಂಟೂರು, ಸೀಡ್ಸ್ ತಳಿಯ ಮೆಣಸಿಕಾಯಿ ಯನ್ನು ಬೆಳೆಯಲಾಗಿತ್ತು.
ತೀವ್ರ ಬರಗಾಲದಿಂದ ಕೀಟಗಳ ಬಾಧೆ ಕಾಡಲಾಯಿತು. ಇದಲ್ಲದೇ ಸೂಕ್ತ ರೀತಿಯಲ್ಲಿ ಮೆಣಸಿಕಾಯಿ ಬೆಳೆಗೆ ಬೆಲೆ ಸಿಗದೇ ರೈತರು ಕೈ ಸುಟ್ಟಕೊಂಡಿದ್ದರು. ಆದ್ದರಿಂದ ಈ ವರ್ಷ ಕಡಿಮೆ ಪ್ರದೇಶದಲ್ಲಿ ಮೆಣಸಿಕಾಯಿ ಬಿತ್ತನೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪರ್ಯಾಯವಾಗಿ ಅಂಜುರ, ಬಾಳೆ, ಪಪ್ಪಾಯಿ, ಸಪೋಟ ಬೆಳೆ ಬೆಳೆಯಲು ರೈತರು ಉತ್ಸಾಹ ತೋರುತ್ತಿರುವುದು ಕಂಡು ಬರುತ್ತಿದೆ.
ಕೋಟ್…
ಈ ವರ್ಷ ಮುಂಗಾರು ಆಶಾದಾಯಕವಾಗುವ ವಿಶ್ವಾಸವಿದೆ. ರೈತರಿಗೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಕಾಲಕ್ಕೆ ಒದಗಿಸಲಾಗುವುದು. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ರೈತರಿಗೆ ಅಗತ್ಯ ನೆರವು ನೀಡಲು ಸಜ್ಜಾಗಿದೆ. ರೈತರು ಮಾಹಿತಿ ಪಡೆದುಕೊಂಡು ಬಿತ್ತನೆ ಮಾಡಬೇಕು.