ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತು ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಮುಂಗಾರು ತಾಂತ್ರಿಕ ಕಾರ್ಯಾಗಾರ ಹಾಗೂ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಗುರುವಾರ ನಡೆಯಿತು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಹಬೀದ್ ಮಾತನಾಡಿ, ಪ್ರಸ್ತುತ ಮುಂಗಾರಿಗೆ ಬಿತ್ತನೆ ಬೀಜ, ಗೊಬ್ಬರ, ಸಸ್ಯ ಸಂರಕ್ಷಣಾ ಪರಿಕರಗಳು ಮತ್ತು ಯಂತ್ರೋಪಕರಣಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಾಗಿದೆ ಎಂದರು.
ತೋಟಗಾರಿಕೆ ಉಪನಿರ್ದೇಶಕ ಶಿವಪ್ರಸಾದ್ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಸೌರಶಕ್ತಿ ಆಧಾರಿತ ನೀರಾವರಿ ಯೋಜನೆ, ಜೇನು ಸಾಕಣೆ, ತಾಳೆ ಬೆಳೆ ಯೋಜನೆ, ಕ್ಷೇತ್ರ ಅಭಿವೃದ್ಧಿ ಹಾಗೂ ಸಸ್ಯ ಕ್ಷೇತ್ರಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಡಾ.ಹನುಮೇಗೌಡ ಮತ್ತು ಡಾ.ಮೂರ್ತಿ ಅವರು ಲಸಿಕೆ ಕಾರ್ಯಕ್ರಮಗಳು, ಜಾನುವಾರಗಳ ವಿಮೆ, ಮೇವು ಅಭಿವೃದ್ಧಿ ಯೋಜನೆ, ಹೈನುಗಾರಿಕೆ ಹಾಗು ಕುರಿ ಮತ್ತು ಮೇಕೆ ಸಾಕಣೆ ಯೋಜನೆಗಳ ವಿವರಣೆ ನೀಡಿದರು. ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜೇಶ್ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಬಗ್ಗೆ ತಿಳಿಸಿ ರೈತರಿಗೆ ಕೃಷಿ ಹೊಂಡಗಳಲ್ಲಿ ಮೀನುಗಾರಿಕೆ ಅಳವಡಿಸಿಕೊಳ್ಳುವುದರಿಂದಾಗುವ ಅನುಕೂಲತೆಯ ಬಗ್ಗೆ ತಿಳಿಸಿಕೊಟ್ಟರು.
ರಾಷ್ಟ್ರೀಯ ಬೀಜ ಪ್ರಾಯೋಜನೆಯ ಬೀಜೋತ್ಪಾದನಾ ಅಧಿಕಾರಿ ಡಾ.ಬಸವರಾಜು ಮಾತನಾಡಿ, ನೂತನ ಬೆಳೆ ತಳಿಗಳು ಮತ್ತು ಅವುಗಳ ಲಭ್ಯತೆಯ ಮಾಹಿತಿ ನೀಡಿದರು. ಜೋಳ ಯೋಜನೆಯ ತಳಿ ವಿಜ್ಞಾನಿ ಡಾ. ಸೋಮು ಅವರು ಜಿಲ್ಲೆಗೆ ಸೂಕ್ತವಾಗಿರುವ ನೂತನ ಜೋಳದ ಕಾಳಿನ ಮತ್ತು ಮೇವಿನ ತಳಿಯ ಬಗ್ಗೆ ತಿಳಿಸಿಕೊಟ್ಟರು.
ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಕಾಶ್ ಮಾತನಾಡಿ, ಸಮಗ್ರ ಕೃಷಿಯಲ್ಲಿ ಬೆಳೆ, ಜಾನುವಾರುಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮತೋಲನ ಸಂಯೋಜನೆಯ ಬಗ್ಗೆ ತಿಳಿಸಿ ಕೃಷಿಯಲ್ಲಿ ರಾಸಾಯನಿಕಗಳು ಕಡೆಯ ಅಸ್ತ್ರವಾಗಿರಬೇಕು ಎಂದರು. ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಶಿವಲಿಂಗಯ್ಯ ಮಾತನಾಡಿ, ರೈತರು ಬೆಳೆ ಸಂಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿಯಲ್ಲಿ ವೈವಿಧ್ಯತೆ ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಲಾಭಕಾರಿಯಾಗುವುದು. ಕೃಷಿ ಪೂರಕ ಚಟುವಟಿಕೆಗಳಾದ ಜೇನು ಸಾಕಣೆ, ಪಶು ಸಂಗೋಪನೆ ಕೈಗೊಳ್ಳಬೇಕು. ರೈತರಿಗೆ ಪ್ರಮುಖ ಬೆಳೆಗಳ ಸಹಭಾಗಿತ್ವ ಬೀಜೋತ್ಪಾದನೆ ಮಾಡಬೇಕು ಎಂದರು.
ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾಶಾಸ್ತ್ರ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗಿರಿಧರ್ ಮಾತನಾಡಿ, ಮೇವಿನ ಬೆಳೆಗಳ ಸುಧಾರಿತ ಬೇಸಾಯ, ರಸಮೇವು ತಯಾರಿಕೆ ಮತ್ತು ಬಳಕೆ ಹಾಗೂ ವಿವಿಧ ಮೇವಿನ ಬೆಳೆ ತಳಿಗಳ ಬಿತ್ತನೆ ಬೀಜದ ಲಭ್ಯತೆಯ ಕುರಿತು ಮಾಹಿತಿ ಒದಗಿಸಿದರು. ಪ್ರಧಾನ ವಿಜ್ಞಾನಿ ಡಾ.ಆನಂದನ್ ಮಾತನಾಡಿ, ಸುಧಾರಿತ ಹೈನುಗಾರಿಕೆ ಮತ್ತು ಲಾಭದಾಯಕ ಕುರಿ-ಮೇಕೆ ಸಾಕಣೆ, ಜಾನುವಾರುಗಳಲ್ಲಿ ಕಂಡು ಬರುವ ಪ್ರಮುಖ ರೋಗಗಳ ಗುಣ ಲಕ್ಷಣಗಳು ಮತ್ತು ಅವುಗಳ ನಿರ್ವಹಣೆಯ ಕುರಿತು ಮಾಹಿತಿ ತಿಳಿಸಿದರು.