ಮುಂಗಾರು, ಚುರುಕು, ಮಳೆ ಕಾರಣ

20 Dwd 2
Published on

ಮಂಜುನಾಥ ಅಂಗಡಿ ಧಾರವಾಡ

2019ರ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆ ಲಕ್ಷಾಂತರ ಜನರ ಬದುಕಿಗೆ ಆಘಾತ ನೀಡಿತ್ತು. ಆದರೆ, ಈ ಬಾರಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂಫಾನ್ ಚಂಡಮಾರುತದ ಪರಿಣಾಮವೂ ಪ್ರಸಕ್ತ ವರ್ಷ ಸಾಮಾನ್ಯ ಮಳೆಗೆ ಕಾರಣವಾಗಲಿದೆ ಎಂದು ಇಲಾಖೆ ರ್ತಸಿದೆ.

1999ರ ನಂತರ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಅಂಫಾನ್, ಸೂಪರ್ ಸೈಕ್ಲೋನಿಕ್ ಆಗಿ ಪರಿವರ್ತನೆಗೊಂಡು, ಕರ್ನಾಟಕದ ಮೇಲೆ ಪರಿಣಾಮ ಬೀರದೇ ಇದ್ದರೂ, ವಾತಾವರಣದಲ್ಲಿನ ತೇವಾಂಶವನ್ನು ಸೆಳೆದಿದೆ.

ಏಪ್ರಿಲ್ ಹಾಗೂ ಮೇನಲ್ಲಿ ಆಗಾಗ ಸುರಿದ ಅಡ್ಡ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದವು. ಶುಕ್ರವಾರ, ಶನಿವಾರ ಮಳೆ ಸುರಿದರೆ ಬಿತ್ತನೆ ಚಟುವಟಿಕೆ ಮತ್ತಷ್ಟು ಜೋರಾಗಲಿದೆ.

ಸಿಬ್ಬಂದಿ ಕೊರತೆ: ರೈತ ಸಮೂಹಕ್ಕೆ ಹವಾಮಾನದ ನಿಖರ ಮಾಹಿತಿ ನೀಡಲು ಕೇಂದ್ರ ಸರ್ಕಾರ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ಉತ್ತರ ಒಳನಾಡು (ಉತ್ತರ ಕರ್ನಾಟಕದ) 13 ಜಿಲ್ಲೆ ವ್ಯಾಪ್ತಿ ಹೊಂದಿರುವ ಕೇಂದ್ರವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವ ಡಾ. ಹರ್ಷವರ್ಧನ್ ಉದ್ಘಾಟಿಸಿದ್ದರು. ಸಿಡಿಲು, ಭಾರಿ ಮಳೆ, ಮಳೆ ಕೊರತೆ, ಬೆಳೆ ನಾಶದ ಮುನ್ಸೂಚನೆ, ಹವಾಮಾನ ವೈಪರೀತ್ಯಗಳಂಥ ಉಪಯುಕ್ತ ಮಾಹಿತಿ ತಲುಪಿಸಲು ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ, 2019ರ ಫೆ. 14ರಂದು ತೆರೆಯಲಾದ ಕೇಂದ್ರಕ್ಕೆ ಹವಾಮಾನ ತಜ್ಞರು, ವಿಜ್ಞಾನಿಗಳು ಸೇರಿ 4-5 ಸಿಬ್ಬಂದಿ ಅಗತ್ಯವಿದ್ದು, ಸರ್ಕಾರ ಇನ್ನೂ ನೇಮಕ ಮಾಡಿಲ್ಲ. ಸದ್ಯ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಚ್. ಪಾಟೀಲ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದಾರೆ.

ಕಳೆದ 5 ವರ್ಷಗಳಲ್ಲಿ ನಿರೀಕ್ಷಿಸಿದಂತೆ ಮಳೆಯಾಗಿದೆ. ಈ ಬಾರಿ ಜೂ. 5ಕ್ಕೆ ಮಳೆ ಪ್ರವೇಶವಾಗಬಹುದೆಂದು ಅಂದಾಜಿಸಲಾಗಿತ್ತು. ಸ್ವಲ್ಪ ಮೊದಲೇ ಬಂದಿದೆ. ಈ ಹಂಗಾಮದಲ್ಲಿ ಒಟ್ಟಾರೆ ಸಾಮಾನ್ಯ ಮಳೆಯಾಗಲಿದೆ. - ಆರ್.ಎಚ್. ಪಾಟೀಲ, ಮುಖ್ಯಸ್ಥರು ಕೃಷಿ ಹವಾಮಾನಶಾಸ್ತ್ರ ವಿಭಾಗ, ಕೃಷಿ ವಿವಿ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net