ಮುಂಗಾರು ಆರಂಭದಲ್ಲೇ ಕೋಟೆನಾಡಲ್ಲಿ ವರುಣಾರ್ಭಟ

Rain
Published on

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ವರುಣಾರ್ಭಟದಿಂದಾಗಿ 12ಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿವೆ. ಎಂಟತ್ತು ಮನೆಗಳ, ಎರಡ್ಮೂರು ಶಾಲೆಗಳ ಶೀಟ್‌ಗಳು ಹಾರಿ ಹೋಗಿದ್ದು, ಜನ ಪರದಾಡುವಂತಾಯಿತು.

ರಾತ್ರಿ 9ಕ್ಕೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 10ರ ನಂತರ ಭಾರಿ ಗುಡುಗು-ಮಿಂಚು ಸಹಿತ ಮಳೆಯಾದ್ದರಿಂದ ಜನಸಂಚಾರ ಅಸ್ತವ್ಯಸ್ತವಾಯಿತು.

ಕೆಲ ಭಾಗಗಳಲ್ಲಿ ಅರ್ಧ ತಾಸು ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ವಿದ್ಯಾನಗರ, ಕಡ್ಲೆ ಭಟ್ಟಿ ಬಳಿ 9, ಚಂದ್ರವಳ್ಳಿ ಎಸ್‌ಜೆಎಂ ಕಾಲೇಜು ಸಮೀಪ 3 ಸೇರಿ ಇತರೆಡೆಗಳಲ್ಲಿ ಮರಗಳು ನೆಲಕ್ಕುರುಳಿದವು. ಮರ ಬಿದ್ದ ರಭಸಕ್ಕೆ ಕೆಲವೆಡೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಯಿತು. ಬನಶಂಕರಿ ಅಪಾರ್ಟ್‌ಮೆಂಟ್, ಜೆಎಂಐಟಿ, ಮಠದಹಟ್ಟಿ, ಗಾರೆಹಟ್ಟಿ ಬಳಿ ವಿದ್ಯುತ್ ಸಂಪರ್ಕ ಕಡಿತವಾಯಿತು.

ಇದ್ದಕ್ಕಿದ್ದಂತೆ ಸುರಿದ ಮಳೆ, ಜೋರಾದ ಗಾಳಿಯಿಂದಾಗಿ ಮೇವಿಗೆ, ತೆಂಗಿನ ಸಸಿಗಳಿಗೂ ಕೆಲವೆಡೆ ಹಾನಿಯಾಗಿದೆ. ಗುಡುಗು-ಮಿಂಚಿನ ಆರ್ಭಟ ಜೋರಾಗಿದ್ದ ಪರಿಣಾಮ ಹೊಲ, ತೋಟಗಳಲ್ಲಿ ನೀರು ಹಾಯಿಸಲು ಹೋದವರು ಗೂಡು ಸೇರಲು ಹರಸಾಹಸಪಟ್ಟರು.

ಕೆಳ ಸೇತುವೆ ಜಲಾವೃತ: ಕೋಟೆ ರಸ್ತೆಯ ಕೆಳಭಾಗ, ಅಗಳೇರಿ, ಕೆಳಗೋಟೆ, ಬುದ್ಧನಗರ, ಸಂತೆಹೊಂಡ ಸೇರಿ ವಿವಿಧ ಬಡಾವಣೆಗಳ ತಗ್ಗು ಪ್ರದೇಶಗಳಲ್ಲಿ ನೀರು ರಭಸವಾಗಿ ಹರಿಯಿತು. ನಗರ ವ್ಯಾಪ್ತಿಯ ಕೆಳ ಸೇತುವೆಗಳು ಕ್ಷಣಾರ್ಧದಲ್ಲಿ ಜಲಾವೃತವಾದವು. ಕೆಲಕಾಲ ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು.

ಸಿರಿಗೆರೆ ಭಾಗದಲ್ಲೂ ಮಳೆಯಾದ್ದರಿಂದ ರಾತ್ರಿಯ ನಂತರ ಸಾಕಷ್ಟು ಹೊತ್ತು ವಿದ್ಯುತ್ ವ್ಯತ್ಯಯ ಉಂಟಾಯಿತು. ಸಂಚರಿಸುವ ವೇಳೆ ದ್ವಿಚಕ್ರ ವಾಹನಗಳಿಂದ ಬಿದ್ದು ಕೆಲವರು ಪೆಟ್ಟು ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

13 ಮನೆ ಭಾಗಶಃ ಹಾನಿ: ಮಳೆಯಿಂದಾಗಿ ಚಿತ್ರದುರ್ಗ ತಾಲೂಕಿನಲ್ಲಿ 9, ಹೊಳಲ್ಕೆರೆ-1, ಹೊಸದುರ್ಗ-3 ಸೇರಿ ಜಿಲ್ಲಾದ್ಯಂತ ಒಟ್ಟು 13 ಮನೆಗಳು ಭಾಗಶಃ, ಮೂರು ಮನೆಗಳು ತೀವ್ರ ಹಾನಿಯಾಗಿವೆ. 10ಕ್ಕೂ ಅಧಿಕ ಹೆಕ್ಟೇರ್ ತೋಟಗಾರಿಕೆ, ಎರಡ್ಮೂರು ಹೆಕ್ಟೇರ್ ಕೃಷಿ ಬೆಳೆ, ಕೆಲ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.

ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ 42.0 ಮಿ.ಮೀ ಮಳೆಯಾಗಿದ್ದು, ಇದು ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ. ಶ್ರೀರಾಂಪುರದಲ್ಲಿ 40.2, ಚಿತ್ರದುರ್ಗ ಭಾಗ 2ರಲ್ಲಿ 34.1, ಭಾಗ 1ರಲ್ಲಿ 27.4, ತಾಲೂಕಿನ ಭರಮಸಾಗರ 13.2, ಸಿರಿಗೆರೆ 11.8, ಹಿರಿಯೂರು ತಾಲೂಕಿನ ಬಬ್ಬೂರು 11.6, ಹೊಳಲ್ಕೆರೆ ತಾಲೂಕಿನ ತಾಳ್ಯದಲ್ಲಿ 16.2, ರಾಮಗಿರಿಯಲ್ಲಿ 11.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಮಳೆ ವರದಿಯ ಪ್ರಾಥಮಿಕ ಮಾಹಿತಿ ಅನ್ವಯ ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿತ್ರದುರ್ಗ ತಾಲೂಕಿನ ಕೆಲವೆಡೆ ಮನೆಗಳಿಗೆ ಹಾನಿ ಉಂಟಾಗಿದ್ದು, ವರದಿ ನೀಡಲು ಸೂಚಿಸಿದ್ದೇನೆ. ಧರೆಗುರುಳಿದ ಮರಗಳ ತೆರವಿಗೂ ಆದೇಶಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net