ಮುಂಗಡ ಶುಲ್ಕ ಪಾವತಿ ರದ್ದು

CTD 05 AVP-07
Published on

ಚಿತ್ರದುರ್ಗ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೇ ಕೋರ್ಸ್‌ನಲ್ಲಿ ಪ್ರವೇಶ ಪಡೆಯುವ ಮುನ್ನ ಮುಂಗಡ ಶುಲ್ಕ ಪಾವತಿಸುವ ಆದೇಶ ರದ್ದುಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಜನಪರವಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ತಿಳಿಸಿದೆ.

ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಜಮಾಯಿಸಿದ ಪರಿಷತ್ ಕಾರ್ಯಕರ್ತರು, ಪದಾಧಿಕಾರಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಸಂಭ್ರಮಿಸಿದರು.
ಪರಿಷತ್‌ನ ರಾಜ್ಯಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೈಕ್ಷಣಿಕ ಆದಾಯ ಮಿತಿ 2.5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

2013ರಿಂದ 2018ರವರೆಗೆ ಜಾರಿಯಲ್ಲಿದ್ದ ರೀತಿಯಲ್ಲೇ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿಯುವ ಜಿಎನ್‌ಎಂ ನರ್ಸಿಂಗ್, ಪ್ಯಾರಾಮೆಡಿಕಲ್, ಬಿಎಸ್ಸಿ ನರ್ಸಿಂಗ್ ತರಬೇತಿಗೆ ಪ್ರವೇಶ ಪಡೆಯುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮತ್ತು ವಸತಿನಿಲಯ ವಿದ್ಯಾರ್ಥಿ ವೇತನವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಮೂಲಕ ಸಂದಾಯವಾಗುವಂತೆ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ವಕೀಲ ಪಾಳ್ಯ ಕುಮಾರ್, ಮುಖಂಡರಾದ ಬಿ.ಆರ್.ಶಿವಕುಮಾರ್, ನನ್ನಿವಾಳ ಹನುಮಂತಪ್ಪ, ಬೀಸನಹಳ್ಳಿ ಜಯಪ್ಪ, ಡಿ.ಎಸ್.ಹಳ್ಳಿ ನರಹರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net