

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳದ ಘೋಷಣೆ ಚುನಾವಣೆ ಗಿಮಿಕ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಈ ಕುರಿತು ಮೂರೂವರೆ ವರ್ಷದಿಂದ ಏಕೆ ಸುಮ್ಮನಿದ್ದರು? ಜನರಿಗೆ ಹುಸಿ ಆಶ್ವಾಸನೆ ನೀಡದೆ ಕಾಲಮಿತಿಯೊಳಗಡೆ ಅನುಷ್ಠಾನದ ಆಶ್ವಾಸನೆ ಕೊಡಬೇಕು. ಮೀಸಲು ಹೆಚ್ಚಳ ಕ್ರೆಡಿಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳವನ್ನು ಮೂರು ತಿಂಗಳ ಒಳಗಡೆ ಶೆಡ್ಯೂಲ್ಡ್ 9ರಲ್ಲಿ ಸೇರ್ಪಡೆ ಮಾಡುತ್ತೇವೆ. ಅದಕ್ಕಾಗಿ ಸುಗ್ರೀವಾಜ್ಞೆ ಜಾರಿಗೊಳಿಸುತ್ತೇವೆಂದು ರಾಜ್ಯ ಬಿಜೆಪಿ ಸರ್ಕಾರ ಆಶ್ವಾಸನೆ ನೀಡಬೇಕು. ನ್ಯಾ.ನಾಗಮೋಹನ್‌ದಾಸ್ ವರದಿ ಆಧಾರದಲ್ಲಿ ಮೀಸಲು ಹೆಚ್ಚಳದ ನಿರ್ಧಾರ ಸ್ವಾಗತಿಸುತ್ತೇವೆ. ಹಾಗೆಯೆ, ಎಷ್ಟು ದಿನದೊಳಗೆ ಅನುಷ್ಠಾನಕ್ಕೆ ತರುತ್ತೇವೆ? ಯಾವಾಗ ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ? ಮೀಸಲು ಹೆಚ್ಚಳದ ವಿರುದ್ಧ ನಮ್ಮ ಜನರು ಕೋರ್ಟಿಗೆ ಹೋಗುವುದಿಲ್ಲವೆಂದು ಪ್ರಮಾಣ ಕೊಡಬೇಕು ಎಂದು ಹೇಳಿದರು.
ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದೆಂದು ಸುಪ್ರೀಂಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಮೀರಿ ಮೀಸಲಾತಿ ಹೆಚ್ಚಿಸುವಿರಾ? ಅಥವಾ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಶೇ.32ರಷ್ಟು ಮೀಸಲಾತಿಯಲ್ಲಿ ಕಡಿತಗೊಳಿಸುವಿರಾ? ಜನರಿಗೆ ಸ್ಪಷ್ಟವಾಗಿ ತಿಳಿಸಿಬೇಕು. ಬಿಜೆಪಿಯವರು ಎಂದಿಗೂ ಮೀಸಲು ವಿರುದ್ಧವಾಗಿದ್ದರು. ಇವರಿಂದ ನ್ಯಾಯ ನಿರೀಕ್ಷಿಸಬಹುದೇ? ಜನರು ಆಲೋಚಿಸಬೇಕು ಎಂದರು.
ಖಾಸಗಿಯಲ್ಲೂ ಮೀಸಲಾತಿ ಜಾರಿ ಮಾಡಿ:
ಕೇಂದ್ರ ಸರ್ಕಾರದ 32 ಲಕ್ಷ ಮತ್ತು ರಾಜ್ಯದಲ್ಲಿ 2.15 ಲಕ್ಷ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ್ನು ಭರ್ತಿ ಮಾಡದೆ ಮೀಸಲು ಹೆಚ್ಚಿಸಿದರೆ ಪ್ರಯೋಜನವೇನು? ಕೇಂದ್ರದ 8 ವರ್ಷಗಳ ಆಡಳಿತದಲ್ಲಿ ಲಾಭದಲ್ಲಿದ್ದ 37 ಕಂಪನಿಗಳನ್ನು ಖಾಸಗೀಕರಣ ಮಾಡಲಾಗಿದೆ. ಖಾಸಗೀಕರಣ ಮಾಡಿದರೆ ಮೀಸಲು ಏಕೆ ಬೇಕು? ಖಾಸಗಿ ವ್ಯವಸ್ಥೆಯಲ್ಲೂ ಮೀಸಲಾತಿ ತಂದರೆ ಅನುಕೂಲವಾಗುತ್ತದೆ ಎಂದರು.
ಪರಿಶಿಷ್ಟರ ಅನುದಾನ ಕಡಿತ:
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿದೆ. 2 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಎಸ್‌ಸಿಪಿ, ಟಿಎಸ್‌ಪಿಗೆ 30 ಸಾವಿರ ಕೋಟಿ ರೂ. ನೀಡಿದ್ದರು. 2.70 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ 24 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಇದು ಎಸ್ಸಿ, ಎಸ್ಟಿ ಸಮಾಜದ ಬಗೆಗಿನ ಬಿಜೆಪಿ ಕಾಳಜಿ ಎಂದು ಟೀಕಿಸಿದರು.
ಲ್ಯಾಪ್‌ಟ್ಯಾಪ್ ವಿತರಣೆ ಸ್ಥಗಿತ:
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ವಿತರಣೆ ನಿಲ್ಲಿಸಲಾಗಿದೆ. ಪಿಎಚ್.ಡಿ ಪದವೀಧರರಿಗೆ ಮಾಸಿಕ 5 ಸಾವಿರ ರೂ. ಸಹಾಯಧನ ನೀಡುತ್ತಿಲ್ಲ. ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ 15 ಲಕ್ಷ ರೂ. ಸ್ಥಗಿತಗೊಳಿಸಲಾಗಿದೆ. ಇದು ಎಸ್ಸಿ, ಎಸ್ಟಿ ಸಮುದಾಯದ ಮೇಲಿರುವ ಪ್ರೀತಿ ಎಂದು ದೂರಿದರು.
ಮೀಸಲಾತಿ ಪರವಾಗಿದ್ದೇವೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್, ಅವರು ಎಂದೂ ಮೀಸಲು ಪರವಾಗಿರಲಿಲ್ಲ. ಸಂತೋಷ್ ಮತ್ತು ಪ್ರಲ್ಹಾದ ಜೋಶಿ ಪಕ್ಷದೊಳಗೆ ಒಡೆದಾಳುವ ನೀತಿ ಅನುಸರಿಸುತ್ತ ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟಿದ್ದಾರೆ. ರಾಜ್ಯಕ್ಕೆ ಇವರಿಬ್ಬರ ಕೊಡುಗೆ ಶೂನ್ಯ ಎಂದರು.
ಸಂಸದ ಪ್ರತಾಪ್ ಸಿಂಹ ಅವರ 8 ವರ್ಷಗಳ ಗ್ರೇಟೆಸ್ಟ್ ಸಾಧನೆ ಎಂದರೆ ರೈಲಿನ ಹೆಸರು ಬದಲಾವಣೆ. ಮೈಸೂರಿಗೆ 26 ರೈಲುಗಳು ಬರುತ್ತವೆ. ಅವುಗಳಲ್ಲಿ ಅನೇಕ ರೈಲುಗಳಿಗೆ ಒಡೆಯರ್ ಹೆಸರಿಡಬಹುದಿತ್ತು. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಿಸುವ ನಿಮ್ಮ ಉದ್ದೇಶವೇನು? ಇದು ಖಂಡನೀಯ ಎಂದರು.