

ಬೀದರ್: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಿಸಲಾತಿ ಹೆಚ್ಚಳ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪರಿಶಿಷ್ಟರ ಶಿಕ್ಷಣ ಮತ್ತು ಉದ್ಯೋಗಕ್ಕೆ ಪೂರಕವಾಗುವಂಥ ಕ್ರಮ ಸರ್ಕಾರ ಕೈಗೊಂಡಿದೆ. ಈ ಕ್ರಮವು ಬಿಜೆಪಿ ಪಕ್ಷಕ್ಕಿರುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಅನ್ಯ ರಾಜಕೀಯ ಪಕ್ಷಗಳು ಕೇವಲ ಈ ಪಂಗಡದವರನ್ನು ಚುನಾವಣೆ ಬಳಸಿಕೊಳ್ಳುತ್ತಿದ್ದರೂ ವಿನಃ ಅಭಿವೃದ್ಧಿ ಮಾಡುವ ಕ್ರಮಕೈಗೊಳ್ಳುತ್ತಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರದ್ದುಪಡಿಸುತ್ತಾರೆ ಎಂಬಿತ್ಯಾದಿ ಸುಳ್ಳು ಸುದ್ದಿ ಹರಡಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಎಲ್ಲ ಸುಳ್ಳು ಆರೋಪಗಳಿಗೆ ತಿಲಾಂಜಲಿ ಹಾಕಿ ಮೀಸಲು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಸಮಾಜವನ್ನು ಮೇಲಕ್ಕೆ ತರುವುದರಲ್ಲಿ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು. ಹೀಗಾಗಿ ದೊಡ್ಡ ಉಡುಗೊರೆಯನ್ನು ಪರಿಶಿಷ್ಟರಿಗೆ ರಾಜ್ಯ ಸರ್ಕಾರ ನೀಡಿದೆ ಎಂದು ಹೇಳಿದ್ದಾರೆ.