ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟನ್ನು ಸ್ಥಳೀಯರಿಗೆ ನೀಡಬೇಕು: ಮುನಿಸ್ವಾಮಿ

ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟನ್ನು ಸ್ಥಳೀಯರಿಗೆ ನೀಡಬೇಕು: ಮುನಿಸ್ವಾಮಿ
Published on

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಲೂರು-ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟನ್ನು ಸ್ಥಳೀಯರಿಗೆ ನೀಡಬೇಕು ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ಮುನಿಸ್ವಾಮಿ ಒತ್ತಾಯಿಸಿದರು.


ಜಿಲ್ಲೆಯಲ್ಲಿ ಬಲಿಷ್ಠ ದಲಿತ ನಾಯಕನನ್ನು ಹುಟ್ಟುಹಾಕುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಪ್ರತಿ ಬಾರಿ ಚುನಾವಣೆಯಲ್ಲೂ ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಕಡೇ ಕ್ಷಣದಲ್ಲಿ ಹೊರ ಜಿಲ್ಲೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.


ಹೊರ ಜಿಲ್ಲೆಯ ಅಭ್ಯರ್ಥಿಗಳಿಗೆ ಕ್ಷೇತ್ರ ಪರಿಚಯವಾಗುಷ್ಟರಲ್ಲಿ ಚುನಾವಣೆ ಮುಗಿದು ಹೋಗಿರುತ್ತದೆ. ಪರಾಜಿತ ಅಭ್ಯರ್ಥಿ ಚುನಾವಣೆ ಬಳಿಕ ಕ್ಷೇತ್ರದ ಕಡೆ ತಿರುಗಿಯೂ ನೋಡುವುದಿಲ್ಲ. ಹೀಗಾಗಿ ಈ ಬಾರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಬಲವಾದ ಆಗ್ರಹವಾಗಿದೆ ಎಂದರು.


ಸಕಲೇಶಪುರ ಕ್ಷೇತ್ರದಿಂದ ಪಕ್ಷದ ಟಿಕೆಟ್ ಬಯಸಿ ಜಿಪಂ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ, ಮಾಜಿ ಶಾಸಕ ಡಿ. ಮಲ್ಲೇಶ್, ವೆಂಕಟೇಶ್ ಹಾಗೂ ಭುವನಾಕ್ಷ ಅರ್ಜಿ ಸಲ್ಲಿಸಿದ್ದಾರೆ. ಈ ನಾಲ್ವರು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಜಿಲ್ಲಾ ಕಾಂಗ್ರೆಸ್ ಎಸ್ಸಿ/ಎಸ್ಟಿ ಘಟಕದ ಮುಖಡರ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಾಲ್ವರು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.


ಈ ಸಂಬಂಧ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಮಣೆ ಹಾಕಿದರೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಡಿ.ಸಿ. ಸಣ್ಣಸ್ವಾಮಿ, ಡಿ. ಮಲ್ಲೇಶ್, ವೆಂಕಟೇಶ್ ಮತ್ತು ಭುವನಾಕ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net