ಮೀಸಲು ರದ್ದತಿಗೆ ಮುಸ್ಲಿಮರ ಸಿಟ್ಟು- ಖಂಡನಾ ಸಮಾವೇಶದಲ್ಲಿ ಸರ್ಕಾರದ ನಡೆಗೆ ಅಸಮಾಧಾನ

muslim.jpg
Published on

ದಾವಣಗೆರೆ: ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ಹಂಚಿಕೆಯಾಗಿದ್ದ ಶೇ.4ರ ಮೀಸಲನ್ನು ರದ್ದುಪಡಿಸಿದ ರಾಜ್ಯ ಸರ್ಕಾರದ ನಿಲುವಿಗೆ ಇಲ್ಲಿನ ಮಂಡಕ್ಕಿ ಭಟ್ಟಿ ಲೇ ಔಟ್‌ನ ಮಿಲಾದ್ ಮೈದಾನದಲ್ಲಿ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದರು.

ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಖಂಡನಾ ಸಮಾವೇಶದಲ್ಲಿ, ಮೀಸಲು ರದ್ದತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ನೌಕರಿಗೆ ಧಕ್ಕೆಯಾಗಿದೆ ಎಂಬ ವಿರೋಧ ವ್ಯಕ್ತವಾಯಿತು.

ಇದೀಗ ರಂಜಾನ್ ಉಪವಾಸ ಆರಂಭವಾಗಿದೆ. ಇದಲ್ಲದೇ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಸಮಾಜದ ಯುವಕರು ಯಾವುದೇ ಕೋಮು ಪ್ರಚೋದನೆಗೆ ಒಳಗಾಗದೆ ಶಾಂತತೆ ಕಾಪಾಡಬೇಕು ಎಂದು ಸಮಾವೇಶ ಕಿವಿಮಾತು ಹೇಳಿತು.

ಸರ್ಕಾರ ಕಸಿದ ಶೇ.4ರ ಮೀಸಲು ಮರಳಿಸಬೇಕು. ಶೇ.16ರ ಜನಸಂಖ್ಯೆಗೆ ಅನುಗುಣವಾಗಿ ಮೀಸಲನ್ನು 6ರಿಂದ ಶೇ.8ಕ್ಕೆ ವಿಸ್ತರಿಸುವ ಅವಕಾಶವಿದೆ. ಹೀಗಾಗಿ ಹಕ್ಕಿಗಾಗಿ ಹೋರಾಟ ನಿಲ್ಲದು. ವಿಧಾನಸಭೆ ಚುನಾವಣೆ ನಂತರದಲ್ಲಿ ಬರುವ ಸರ್ಕಾರ ಸ್ಪಂದಿಸದಿದ್ದಲ್ಲಿ ಹಕ್ಕೊತ್ತಾಯಕ್ಕಾಗಿ ದಾವಣಗೆರೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಸಮಾವೇಶ ನಿರ್ಣಯಿಸಿತು.

ಸಂವಿಧಾನದ ಅನುಚ್ಛೇಧಗಳ ಉಲ್ಲೇಖ, ಆಯೋಗಗಳ ವರದಿಯನ್ವಯ ಮುಸ್ಲಿಮರಿಗೆ ನೀಡಿದ 2ಬಿ ಮೀಸಲನ್ನು ರದ್ದುಪಡಿಸಬಾರದು. ರಾಜೇಂದ್ರ ಸಾಚಾರ್-ರಂಗನಾಥ ಮಿಶ್ರಾ ಆಯೋಗದ ವರದಿಯಂತೆ ಶೇಕಡವಾರು ಹೆಚ್ಚಿನ ಮೀಸಲು ನಿಗದಿಗೊಳಿಸಿ ಜಾರಿಗೊಳಿಸುವಂತೆ ಆಗ್ರಹಿಸಿ ಸಮಾವೇಶದಲ್ಲಿ ಅಸೋಸಿಯೇಷನ್‌ನಿಂದ ಡಿಸಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ ನಮಗಿಂದು ಕರಾಳ ದಿನ. ಸರ್ಕಾರ ನಮಗೆ ದ್ರೋಹ ಬಗೆದಿದೆ. ಅಧಿಕಾರಕ್ಕಾಗಿ ನಮ್ಮ ಸಮಾಜವನ್ನು ನಿರ್ನಾಮ ಮಾಡಲು ಹೊರಟಿದೆ. ಶಿಕ್ಷಣದಲ್ಲಿ ಮೀಸಲು ಸಿಕ್ಕರೆ ನಮ್ಮ ಮಕ್ಕಳಿಗೆ ನೌಕರಿ ಸಿಗಬಹುದು. ಸಮಾಜಗಳ ನಡುವೆ ಸೌಹಾರ್ದ ಕೆಡಿಸುವುದು ಸರಿಯಲ್ಲ ಎಂದರು.

ಸಮಾಜದ ಗುರು ಮೌಲಾನಾ ಇಬ್ರಾಹಿಂ ಸಖಾಫಿ ಮಾತನಾಡಿ ನಾವು ಈ ದೇಶದ ಪ್ರಜೆಗಳು. ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಮೀಸಲು ತೆಗೆದದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸಮಾಜದ ಗುರುಗಳಾದ ಮೌಲಾನಾ ಮಹ್ಮದ್ ಹನೀಫ್ ರಜಾ ಖಾದ್ರಿ, ಮೌಲಾನಾ ನಸೀರ್ ಮಿಸ್ಬಾಯಿ, ಜೆ.ಅಮಾನುಲ್ಲಾಖಾನ್ ಚಮನ್‌ಸಾಬ್, ಮಹ್ಮದ್ ಇಕ್ಬಾಲ್, ಎಚ್.ವಿಶ್ವನಾಥ್, ಅಸೋಸಿಯೇಷನ್ ಅಧ್ಯಕ್ಷ ಷೇಕ್ ದಾದಾಪೀರ್, ಕಾರ್ಯದರ್ಶಿ ಸಾಬಿರ್ ಅಲಿಖಾನ್, ಪಾಲಿಕೆ ಸದಸ್ಯ ಎ.ಬಿ.ರಹೀಂಸಾಬ್, ಸದಸ್ಯ ಸಯೀದ್ ಚಾರ್ಲಿ, ಶಫಿಕ್ ಪಂಡಿತ್, ಮಹ್ಮದ್ ಜಬೀವುಲ್ಲಾ, ಎಚ್.ಶಫಿ ಅಹ್ಮದ್, ಕೆ.ದಾದಾಪೀರ್, ಟಿ. ಅಸ್ಗರ್, ಎಸ್.ಕೆ. ಅಮ್ಜದ್‌ಸಾಬ್ ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net