

ಚಿತ್ರದುರ್ಗ: ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ವಿಧಾನ ಪರಿಷತ್ ಸದಸ್ಯರು ಮಂಗಳವಾರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ನೂರಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಮೊದಲ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತ ಅವಧಿ ಮುಕ್ತಾಯವಾಗಿದೆ. ಆದರೆ ಹಲವು ತಿಂಗಳು ಕಳೆದರೂ ಹೊಸಬರ ಆಯ್ಕೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಮೀಸಲು ಪಟ್ಟಿ ಪ್ರಕಟಗೊಳ್ಳದೇ ಇರುವುದು, ಚುನಾಯಿತ ಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ.
ಆದ್ದರಿಂದ ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಮೀಸಲು ಪಟ್ಟಿ ಪ್ರಕಟಿಸಬೇಕೆಂದು ಆಗ್ರಹಿಸಿ, ಎಂಎಲ್‌ಸಿ ಕೆ.ಎಸ್.ನವೀನ್ ಅವರು ಸಚಿವರನ್ನು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಸುಜಾಕು ಶಾಲಪ್ಪ, ಡಿ.ಎಸ್.ಅರುಣ್, ಪಿ.ಎಚ್.ಪೂಜಾರ್ ಹಾಗೂ ಪ್ರದೀಪ್‌ಶೆಟ್ಟರ್ ಇದ್ದರು.