ಮೀಸಲು ಅರಣ್ಯ ರಕ್ಷಣೆ ಸವಾಲು

26spt2
Published on

ಸೋಮವಾರಪೇಟೆ: ತಾಲೂಕಿನಲ್ಲಿ ಬಿಸಿಲಿನ ದಗೆ ಹೆಚ್ಚಾಗುತ್ತಿದ್ದು, ಬೆಲೆ ಬಾಳುವ ಗಿಡ, ಮರಗಳು, ಅಪರೂಪದ ಪ್ರಾಣಿ ಪ್ರಭೇದಗಳಿರುವ ಮೀಸಲು ಅರಣ್ಯವನ್ನು ಕಾಳ್ಗಿಚ್ಚಿನಿಂದ ಕಾಪಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಯಡವನಾಡು ಮೀಸಲು ಅರಣ್ಯದ ಸಜ್ಜಳ್ಳಿ, ಯಲಕನೂರು, ಕಾಜೂರು, ಕಾರೇಕೊಪ್ಪ, ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಬಾಣಾವಾರ, ಜೇನುಕಲ್ಲುಬೆಟ್ಟ ಸೇರಿದಂತೆ 6,043 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಂಪೂರ್ಣ ಒಣಗಿದ್ದು, ಅವುಗಳ ರಕ್ಷಣೆ ಅರಣ್ಯ ಇಲಾಖೆ ಮೇಲಿದೆ.

ಸೋಮವಾರಪೇಟೆ ವಲಯದಲ್ಲಿ ನಿಡ್ತ ಮೀಸಲು ಅರಣ್ಯ 1,843 ಹೆಕ್ಟೇರ್, ಯಡವನಾಡು ಮೀಸಲು ಅರಣ್ಯ 3,300 ಹೆಕ್ಟೇರ್, ಜೇನುಕಲ್ಲು ಬೆಟ್ಟ 900 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿ ಅಪರೂಪದ ಪ್ರಾಣಿ ಪ್ರಭೇದಗಳಿವೆ. ಕಾಡಾನೆಗಳು, ಜಿಂಕೆ, ಕಡವೆ, ಮೊಲ, ಚಿರತೆ, ಮುಂಗುಸಿ, ಉಡ, ಉರಗಗಳು, ಮುಳ್ಳುಹಂದಿ, ಅಪರೂಪದ ಪಕ್ಷಿಗಳು ಇನ್ನಿತರ ಪ್ರಾಣಿಗಳನ್ನು ಬೆಂಕಿನಿಂದ ರಕ್ಷಿಸಬೇಕಾದ ಹೆಚ್ಚಿನ ಜವಾಬ್ದಾರಿ ಅರಣ್ಯ ಇಲಾಖೆಗೆ ಇದೆ.

ತಾಲೂಕಿನ ಮಟ್ಟಿಗೆ ನಿಡ್ತ ಮೀಸಲು ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಎರಡು ವರ್ಷದ ಹಿಂದೆ ಈ ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು, ಹತ್ತಾರು ಎಕರೆಯಷ್ಟು ಅರಣ್ಯ ಬೆಂಕಿಗಾಹುತಿಯಾಗಿತ್ತು. ನಂತರ ಬೆಂಕಿ ನಂದಿಸಲಾಗಿತ್ತು. ಅರಣ್ಯಕ್ಕೆ ಬೆಂಕಿ ಬಿದ್ದ ನಂತರ ಆಗ್ನಿಶಾಮಕ ಸಿಬ್ಬಂದಿ ಬರಬೇಕು. ರಸ್ತೆ ಇಲ್ಲದಿದ್ದೆಡೆ ಅರಣ್ಯದೊಳಗೆ ಹೋಗಲು ಸಾಧ್ಯವಿಲ್ಲ. ಈ ವೇಳೆ ಸೊಪ್ಪನ್ನು ಹಿಡಿದು ಬಡಿದು ಬೆಂಕಿಯನ್ನು ನಂದಿಸುವ ಕಾರ್ಯವನ್ನು ಅರಣ್ಯ ಸಿಬ್ಬಂದಿ ಮಾಡಬೇಕು. ಯಡವನಾಡು ಮೀಸಲು ಅರಣ್ಯದ ವಾಚ್ ಟವರ್‌ನಲ್ಲಿ ಬೈನಾಕುಲಾರ್ ಉಪಯೋಗಿಸಿ, ಸುತ್ತಲ ಮೀಸಲು ಅರಣ್ಯವನ್ನು ವೀಕ್ಷಿಸುತ್ತಿರುತ್ತಾರೆ. ಬೆಂಕಿ ಕಾಣಿಸಿಕೊಂಡರೆ, ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

ಎರಡು ವರ್ಷದ ಹಿಂದೆ ಯಡವನಾಡು ಮೀಸಲು ಅರಣ್ಯದ ಸ್ವಲ್ಪ ಭಾಗ ಕಾಳ್ಗಿಚ್ಚಿನಿಂದ ನಾಶವಾಗಿದೆ. ಪ್ರತಿವರ್ಷವೂ ಅನಾಹುತ ಸಂಭವಿಸುತ್ತಿದ್ದರೂ, ಅರಣ್ಯ ಇಲಾಖೆಯ ಮೇಲಧಿಕಾರಿಗಳು ವೈಜ್ಞಾನಿಕವಾಗಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದೇ ದುರಂತ. ಆರ್‌ಎಫ್‌ಒ, ಡಿಆರ್‌ಎಫ್‌ಒ, ಗಾರ್ಡ್‌ಗಳು, ವಾಚರ್‌ಗಳು, ಅರಣ್ಯ ರಕ್ಷಕರು, ಆರ್.ಆರ್.ಟಿ ಸೇರಿದಂತೆ 50 ಮಂದಿ ಸಿಬ್ಬಂದಿಯಿಂದ 6,043 ಹೆಕ್ಟೇರ್ ಮೀಸಲು ಅರಣ್ಯವನ್ನು ಕಾಳ್ಗಿಚ್ಚಿನಿಂದ ರಕ್ಷಿಸಬೇಕಾದ ಅನಿವಾರ್ಯತೆ ಒದಗಿದೆ.

ನಿಡ್ತ, ಮಾಲಂಬಿ, ಯಡವನಾಡು, ಜೇನಕಲ್ಲು ಬೆಟ್ಟದಲ್ಲಿ ಅಮೂಲ್ಯವಾದ ಜೀವಸಂಕುಲಗಳಿವೆ. ಬಿದಿರು ಒಂದಕ್ಕೊಂದು ಉಜ್ಜುವುದರಿಂದ ಬೆಂಕಿ ಉತ್ಪತಿಯಾಗುತ್ತದೆ. ವನ್ಯಮೃಗಗಳು ಕಲ್ಲಿನ ಮೇಲೆ ಜಿಗಿದಾಗ ಬೆಂಕಿ ಕಿಡಿಯಿಂದ ಬೆಂಕಿ ಹತ್ತಿಕೊಳ್ಳಬಹುದು. ತೇಗದ ಎಲೆಗಳು ಒಣಗಿ, ಉಷ್ಣಾಂಶ ಹೆಚ್ಚಾದಾಗ ಬೆಂಕಿ ಹತ್ತಿಕೊಂಡು ಕಾಳ್ಗಿಚ್ಚು ಉಂಟಾಗಬಹುದು. ಅಲ್ಲದೆ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ, ಬೀಡಿ, ಸಿಗರೇಟಿನ ಕಿಡಿಯಿಂದಲೂ ಬೆಂಕಿ ಆವರಿಸುತ್ತದೆ.
ತೇಗ, ಹೊನ್ನೆ, ಬೀಟೆ, ಶ್ರೀಗಂಧ, ನಂದಿ, ಅರಿಸಿನ ತೇಗ, ಬಿಲ್ವರ್, ಬೂರುಗ, ತಡಸಲು, ಕಡಲ, ದಿಂಡಿಗ, ಮತ್ತಿ, ಹಸಿರುಗಣೆ ಇಂತಹ ಅನೇಕ ಜಾತಿಯ ಮರಗಳು ಮೀಸಲು ಅರಣ್ಯದಲ್ಲಿವೆ. ಅರಣ್ಯದೊಳಗಿರುವ ಅರಸಿಕೆರೆ, ಗಾರೇಕಟ್ಟೆಕೆರೆ, ಹೊನ್ನಕೆರೆ, ಸಜ್ಜಳ್ಳಿ ಕೆರೆಗಳಲ್ಲಿ ನೀರಿದ್ದು, ಅವುಗಳಲ್ಲಿ ಕಾಡುಪ್ರಾಣಿಗಳು ನೀರು ಕುಡಿಯುತ್ತಿವೆ. ಈ ಕಾರಣದಿಂದ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ವಲಸೆ ಹೋಗಿಲ್ಲ. ಕೆರೆಗಳಲ್ಲಿ ನೀರು ಬತ್ತಿ ಹೋದರೆ, ಕಾಡು ಪ್ರಾಣಿಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಬಹುದು. ಇದು ಸಾಧ್ಯವಾಗದಿದ್ದರೆ, ಕುಡಿಯುವ ನೀರು ಅರಸಿ, ಪ್ರಾಣಿಗಳು ಗ್ರಾಮಗಳ ಕಡೆ ವಲಸೆ ಬರಬಹುದು. ಒಂದೆರಡು ಇಂಚು ಮಳೆ ಸುರಿದರೆ, ಲಂಟಾನ, ಮರ-ಗಿಡಗಳು ಚಿಗುರಿ, ಕಾಳ್ಗಿಚ್ಚು ಆತಂಕದಿಂದ ಬಚವಾಗಬಹುದು. ಅಪರೂಪದ ಪ್ರಾಣಿ ಪಕ್ಷಿಗಳು ಬದುಕುಳಿಯಲಿವೆ ಎಂದು ಅರಣ್ಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net