

ಬೀದರ್: ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಖಜಾನೆಯಿಂದ ಒಂದು ರೂಪಾಯಿ ಕೊಡುತ್ತಿಲ್ಲ. ಸಂವಿಧಾನಬದ್ಧ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಬಳಸಿ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಬಜೆಟ್ ಮಂಡನೆಯಾಗಿ ಎರಡು ತಿಂಗಳಾದರೂ ಒಂದು ಇಲಾಖೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಆಯ್ಕೆಯಾಗಿರುವ ಶಾಸಕರಿಗೆ 10 ಲಕ್ಷ ರೂ. ಸಹ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ. ಅನುದಾನವೇ ಇಲ್ಲದಿದ್ದರೆ ಕ್ಷೇತ್ರದ ಅಭಿವೃದ್ಧಿ, ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಹೇಗೆ ಸಾಧ್ಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯದ ಬಹುತೇಕ ಕಡೆ ಭೀಕರ ಬರಗಾಲ ಆವರಿಸಿದೆ. ಸಮರೋಪಾದಿಯಲ್ಲಿ ಬರ ಪರಿಹಾರ ಕೆಲಸ ಮಾಡಬೇಕಾದ ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಮಳೆಯಿಲ್ಲದೆ ವಿವಿಧ ಬೆಳೆಗಳು ಬಾಡುತ್ತಿವೆ. ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡುತ್ತಿದೆ. ರಾಜ್ಯದ ಕೇವಲ 105 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವ ಸರ್ಕಾರ ಇನ್ನುಳಿದ ತಾಲೂಕುಗಳ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರೆ ಸರ್ಕಾರದ ಕೆಲಸದ ವೇಗ ಯಾವ ರೀತಿ ಇದೆ ಗೊತ್ತಾಗುತ್ತದೆ ಎಂದು ಟೀಕಿಸಿದರು.
ಸರ್ಕಾರದ ಕೃಪಾಕಟಾಕ್ಷದಲ್ಲೇ ವರ್ಗಾವಣೆ ದಂಧೆ ನಡೆದಿದೆ. ವರ್ಗಾವಣೆಗೆ ಹಣ ಕೊಡುತ್ತಿಲ್ಲ. ಇರುವ ಸ್ಥಳದಲ್ಲೇ ಮುಂದುವರಿಯಲು ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸುಮಾರು 60 ಪಿಡಿಒಗಳು ವೇಟಿಂಗ್ ಪಟ್ಟಿಯಲ್ಲಿದ್ದು, ಈವರೆಗೆ ಸ್ಥಳ ನಿಯುಕ್ತಿ ಮಾಡಲಾಗಿಲ್ಲ ಎಂದು ದೂರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ವಿಜಯಕುಮಾರ ಪಾಟೀಲ್ ಗಾದಗಿ, ಅನೀಲ ಭೂಸಾರೆ, ಅರಹಂತ ಸಾವಳೆ ಇತರರಿದ್ದರು.