ಮೀಸಲಾತಿಯಿಂದ ಯುವ ಸಮುದಾಯಕ್ಕೆ ಅನುಕೂಲ

HUN-OCT-9-1(VALMIKI JAYANTHI)
ಹುಣಸೂರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ನಿಲುವಾಗಿಲು ಪ್ರಭಾಕರ್, ನಿಂಗರಾಜ ಮಲ್ಲಾಡಿ ಇದ್ದರು.
Published on


ಶಾಸಕ ಎಚ್.ಪಿ.ಮಂಜುನಾಥ್ ಅಭಿಮತ



ಹುಣಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರ ಮೀಸಲಾತಿ ಪ್ರಮಾಣವನ್ನು ಏರಿಕೆ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಶೀಘ್ರ ಅದನ್ನು ಜಾರಿಗೆ ತರುವ ಮೂಲಕ ಸಮುದಾಯದ ಯುವಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಒತ್ತಾಯಿಸಿದರು.


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಯಕ ಸಮಾಜದ ಬಹು ವರ್ಷಗಳ ಹೋರಾಟಕ್ಕೆ ಫಲ ದೊರಕಿದೆ. ಸಮಿತಿ ನೀಡಿದ ವರದಿ ಮಂಡನೆಯಾಗಿ 2 ವರ್ಷಗಳೇ ಸಂದಿವೆ. ಬಲವಾದ ಒತ್ತಾಯದ ನಂತರ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಜಾರಿಗೊಳಿಸಲು ಮುಂದಾಗಿದೆ ಎಂದರು.


ಕುಟುಂಬ ಹೇಗಿರಬೇಕೆಂದು ವಿಶ್ವಕ್ಕೆ ರಾಮಾಯಣ ಮಹಾಗ್ರಂಥದ ಮೂಲಕ ತಿಳಿಸಿಕೊಟ್ಟವರು ಮಹಾನುಭವಿ ಮಹರ್ಷಿ ವಾಲ್ಮೀಕಿ. ನ್ಯಾಯ ಮತ್ತು ಮಾನವೀಯತೆ ಅವರ ಮಹಾಗ್ರಂಥದ ತಿರುಳು. ಆ ಸಮುದಾಯದವರಿಗೆ ನ್ಯಾಯ ಒದಗಿಸಲು ಎಲ್ಲ ರಾಜಕೀಯ ಪಕ್ಷಗಳು ಹೋರಾಟ ನಡೆಸಿವೆ. ಮೀಸಲಾತಿ ಎನ್ನುವ ಸೂಕ್ಷ್ಮ ವಿಷಯವನ್ನು ಸರ್ಕಾರಗಳು ಅತ್ಯಂತ ನಾಜೂಕಾಗಿ ನಿರ್ವಹಿಸಿ, ಜಾತಿ ಸಂಘರ್ಷ ಆಗದಂತೆ ಕ್ರಮವಹಿಸುವುದು ಅಗತ್ಯ ಎಂದರು.


ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಇತಿಹಾಸವನ್ನು ಅಕ್ಷರರೂಪದಲ್ಲಿ ನೀಡಿದವರು ಮಹರ್ಷಿ ವಾಲ್ಮೀಕಿ. ವಾಲ್ಮೀಕಿ ಅವರ ರಾಮಾಯಣವನ್ನು ರಸಋಷಿ ಕುವೆಂಪು ಸರಳಗನ್ನಡದ ಮೂಲಕ ಮತ್ತೊಮ್ಮೆ ನೀಡಿದ್ದಾರೆ. ರಾಮಾಯಣ ಗ್ರಂಥವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನೀಡಿದ ಮಹಾನ್ ಗ್ರಂಥ. ರಾಜ್ಯ ಸರ್ಕಾರ ಮೀಸಲಾತಿ ಏರಿಕೆಯಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಮೂಲಕ ಶೋಷಿತ ಸಮುದಯಕ್ಕೆ ಸಾಮಾಜಿಕ ನ್ಯಾಯ ನೀಡಲು ಮುಂದಾಗಿದೆ. ಈ ನಡುವೆ ಮೀಸಲಾತಿ ಪಡೆದವರೇ ಮತ್ತೆ ಪಡೆಯುವುದನ್ನು ನಿಯಂತ್ರಿಸುವ, ಒಳಮೀಸಲಾತಿ ನೀಡುವ ಮಹತ್ತರ ನಿರ್ಧಾರಗಳು ಆಗಬೇಕಿದೆ ಎಂದರು.


ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಒಮ್ಮೆ ಮೀಸಲಾತಿ ಸೌಲಭ್ಯವನ್ನು ಪಡೆದ ಕುಟುಂಬ ಮತ್ತೆ ಸೌಲಭ್ಯ ಪಡೆಯ ದಂತೆ ಆಂದೋಲನವನ್ನು ಶೋಷಿತ ಸಮುದಾಯಗಳೇ ಒಂದುಗೂಡಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಮೀಸಲಾತಿ ಎಲ್ಲರಿಗಾಗಿ ಎನ್ನುವುದನ್ನು ನಾವೆಲ್ಲರೂ ಅರಿಯಬೇಕೆಂದರು.


ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ನಾಯಕ ಸಮಾಜದ ಮುಖಂಡ ನಿಲುವಾಗಿಲು ಪ್ರಭಾಕರ್ ಮಾತನಾಡಿದರು. ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ದಲಿತ ಮುಖಂಡರಾದ ಜೆ.ಮಹದೇವ್, ಡಿ.ಕುಮಾರ್, ಶಿವಣ್ಣ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಹಿರಿಯ ರಂಗಕಲಾವಿದ ಜಯರಾಂ, ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ಸುಬ್ಬರಾವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net