

ಹಾಸನ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಪೊಲಿಟಿಕಲ್ ಗಿಮಿಕ್ ಅಲ್ಲ, ಆ ರೀತಿಯ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸೋಮವಾರ ಕುಟುಂಬ ಸಮೇತ ಹಾಸನಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭನುವಾರ ರಾತ್ರಿ 10.30 ರಿಂದಲೇ ಹೆಚ್ಚುವರಿ ಮೀಸಲಾತಿ ಜಾರಿಯಾಗಿದೆ. ಅನೇಕ ದಶಕಗಳಿಂದ ಮೀಸಲಾತಿ ಹೆಚ್ಚಳ ಹೋರಾಟ ನಡೆಯುತ್ತಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಜನಸಂಖ್ಯಾವಾರು ಮೀಸಲಾತಿ ಹೆಚ್ಚಳ ಅಗತ್ಯ ಇತ್ತು. ಹಿಂದಿನ ಸರ್ಕಾರಗಳು ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಮೀಸಲಾತಿ ಹೆಚ್ಚಳ ಕುರಿತು ನಾನು ಸಹ ಒತ್ತಾಯ ಮಾಡಿದ್ದೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂಬುದಾಗಿ ಮಾತು ಕೊಟ್ಟಿದ್ದೆ. ಅದರಂತೆ ಬಿಜೆಪಿ ಸರ್ಕಾರ ನಡೆದುಕೊಂಡಿದೆ. 150 ಸಮುದಾಯದಗಳ ಜನರಿಗೆ ಈ ಮೀಸಲಾತಿ ಹೆಚ್ಚಳದಿಂದ ಅನುಕೂಲ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಆ ಎಲ್ಲ ಸಮುದಾಯಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿಯ ಎಲ್ಲ ನಿಗಮಗಳನ್ನು ಒಂದುಗೂಡಿಸುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವೇಗೌಡರ ಆರೋಗ್ಯ ಬೇಡಿದ್ದೇನೆ:
ದೀಪಾವಳಿಯ ದಿನ ಹಾಸನಾಂಬೆ ದೇವಿ ಆಶೀರ್ವಾದ ಪಡೆದಿದ್ದೇನೆ. ಈ ಮಣ್ಣಿನ ಮಗ, ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ಸುಧಾರಿಸಬೇಕು ಎಂದು ಬೇಡಿಕೊಂಡಿದ್ದೇನೆ. ಅವರು ಈ ರಾಜ್ಯಕ್ಕೋಸ್ಕರ, ದೇಶಕ್ಕೋಸ್ಕರ ಬಹಳಷ್ಟು ದುಡಿದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತಾಧಿಕಾರಿ ಬಿ.ಎ. ಜಗದೀಶ್ ಅವರು ಸಚಿವರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು.