ಮೀಸಲಾತಿ ವಿಷಯದಲ್ಲಿ ಬಿಜೆಪಿ ಗಿಮಿಕ್ ರಾಜಕಾರಣ

Mukhyamantri Chandru
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಒಳ ಮೀಸಲಾತಿ ಪ್ರಕಟಿಸುವ ಮೂಲಕ ಬಿಜೆಪಿ ಗಿಮಿಕ್ ರಾಜಕಾರಣ ಮಾಡುತ್ತಿದೆ. ಈ ಮೀಸಲಾತಿ ಅಸಿಂಧು. ಈ ನಿಟ್ಟಿನಲ್ಲಿ ಚುನಾವಣೆ ನಂತರ ಕಾನೂನು ಹೋರಾಟ ಮಾಡುವ ಕುರಿತು ರ್ಚಚಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಹಿಂದುಳಿದ ವರ್ಗಗಳ ಆಯೋಗದ ಶಾಶ್ವತ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರಿಂದ ವರದಿಯನ್ನೇ ಪಡೆದಿಲ್ಲ. ತಿದ್ದುಪಡಿಯಾದ ಮೀಸಲಾತಿ ಪಟ್ಟಿಯನ್ನು ಶೆಡ್ಯೂಲ್ಡ್ 9ರಲ್ಲಿ ಸೇರಿಸುವ ಕಸರತ್ತೂ ಮಾಡಿಲ್ಲ. ಮೀಸಲಾತಿ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಕಾನೂನು ಬಾಹಿರ ಎಂದು ದೂರಿದರು.

ಮೂರು ಪಕ್ಷದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಭ್ರಷ್ಟಾಚಾರ ಮೇರೆ ಮೀರಿದೆ. ಇಂತಹ ಪಕ್ಷಗಳನ್ನು ದೂರ ಇಡುವ ಉದ್ದೇಶವನ್ನು ಜನರು ಹೊಂದಿದ್ದಾರೆ. ಪಂಜಾಬ್ ಮತ್ತು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕರುನಾಡಿನ ಜನರು ಬಯಸುತ್ತಿದ್ದಾರೆ. ಅವರೂ ಶೀಘ್ರವೇ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದರು.

10 ಆಶ್ವಾಸನೆ ಎನ್ನುವುದಕ್ಕಿಂತ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೇವೆ. ಕಾಂಗ್ರೆಸ್​ದು ಬೋಗಸ್ ಗ್ಯಾರಂಟಿ ಕಾರ್ಡ್. ನಮ್ಮ ಪಕ್ಷದಿಂದ ಸದ್ಯ 80 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದೇವೆ. ಇನ್ನುಳಿದ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. 224 ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ನಮ್ಮ ಪಕ್ಷದಿಂದ ಜನಸಾಮಾನ್ಯ ವ್ಯಕ್ತಿಯೊಬ್ಬ ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಲು ನಿರಾಕರಿಸಿದರು.

ಭ್ರಷ್ಟಾಚಾರದಿಂದ ಬಚಾವಾಗಲು ಬಿಜೆಪಿ ಸೇರ್ಪಡೆ

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದರು. ಅಲ್ಲದೇ ಎಎಪಿ ರಾಜ್ಯಾಧ್ಯಕ್ಷರಾಗಬೇಕೆಂಬ ಇಚ್ಛೆ ಇತ್ತು. ಎರಡೂ ನಮ್ಮ ಪಕ್ಷದಲ್ಲಿ ಖಾಲಿ ಇಲ್ಲವಾಗಿದ್ದರಿಂದ ಅವರು ಬಿಜೆಪಿ ಸೇರಿದರು. ಮಾಡಾಳು ವಿರೂಪಾಕ್ಷಪ್ಪ ಅವರು ಭ್ರಷ್ಟಾಚಾರದಿಂದ ಮುಕ್ತಿ ಪಡೆಯುವ ರೀತಿಯಲ್ಲಿ ತಾವೂ ಬಚಾವ್ ಆಗಬೇಕೆಂದುಕೊಂಡಿರಬಹುದು. ಹಾಗಾಗಿ ಪಕ್ಷ ತೊರೆದಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net